ಇಂದು ರಾಜ್ಯಸಭಾ ಚುನಾವಣಾ ನಾಮಪತ್ರ ಸಲ್ಲಿಕೆಗೆ ಕಡೇ ದಿನ

ಬೆಂಗಳೂರು- ರಾಜ್ಯದಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಪಕ್ಷ ಮೂವರು ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಎಲ್ಲಾ ಮೂವರೂ ಅಭ್ಯರ್ಥಿಗಳು ಕನ್ನಡಿಗರೇ ಆಗಿದ್ದಾರೆ.

ಆದರೆ, ಬಿಜೆಪಿಯೂ ಉದ್ಯಮಿ ರಾಜೀವ್ ಚಂದ್ರಶೇಖರ್ ಗೆ ಟಿಕೇಟ್ ನೀಡಿ ಕನ್ನಡಗರ ಆಕ್ರೋಶಕ್ಜೆ ಗುರಿಯಾಗಿದೆ.

ಸ್ಯಾಮ್ ಪಿತ್ರೋಡಾಗೆ ಟಿಕೆಟ್ ಕೊಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ನೀಡಿದ್ದ ಮನವಿಯನ್ನು ಸಿದ್ದರಾಮಯ್ಯ ಈ ಮೂಲಕ ತಿರಸ್ಕರಿಸಿ ತಮ್ಮ ಛಲ ಸಾಧಿಸಿದ್ದಾರೆ. ಎಲ್. ಹನುಮಂತಯ್ಯ, ನಸೀರ್ ಹುಸೇನ್ ಮತ್ತು ಜಿ.ಸಿ.ಚಂದ್ರಶೇಖರ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭಾ ಟಿಕೆಟ್ ಸಿಕ್ಕಿದೆ. ಈ ಮೂವರೂ ಅಭ್ಯರ್ಥಿಗಳು ನಾಳೆ ಸೋಮವಾರ ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

ಮತ್ತೊಂದು ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷವು ಈ ಬಾರಿ ಒಬ್ಬ ಒಕ್ಕಲಿಗ ಅಭ್ಯರ್ಥಿಗೆ ಮಣೆ ಹಾಕಿದೆ. ಒಕ್ಕಲಿಗ, ದಲಿತ ಹಾಗೂ ಮುಸ್ಲಿಮ್ ವ್ಯಕ್ತಿಗಳಿಗೆ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭಾ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ.

ಎಲ್. ಹನುಮಂತಯ್ಯ ಅವರು ಪರಿಶಿಷ್ಟ ಜಾತಿಯ ಎಡಗೈ ಕೋಮಿಗೆ ಸೇರಿದವರಾಗಿದ್ದಾರೆ. ಎಐಸಿಸಿ ವಕ್ತಾರರಾಗಿರುವ ನಸೀರ್ ಹುಸೇನ್ ಅವರಿಗೆ ಅಲ್ಪಸಂಖ್ಯಾತ ಕೋಟಾದಡಿ ಟಿಕೆಟ್ ನೀಡಲಾಗಿದೆ. ಆದರೆ, ಅಚ್ಚರಿಯ ಆಯ್ಕೆ ಎನಿಸಿದ್ದು ಮೂರನೇ ಅಭ್ಯರ್ಥಿ ಜಿ.ಸಿ.ಚಂದ್ರಶೇಖರ್ ಅವರದ್ದು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಒಕ್ಕಲಿಗ ಸಮುದಾಯದ ಚಂದ್ರಶೇಖರ್ ಅವರು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಆಪ್ತರೆನಿಸಿದ್ದಾರೆ.

ಈ ಮೂರೂ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಿದ್ದರಾಮಯ್ಯ ಅವರ ನಿರ್ಧಾರವೇ ಅಂತಿಮವೆನ್ನಲಾಗಿದೆ.

ಜೆಡಿಎಸ್​ಗೆ ಸಿದ್ದು ತಿರುಗೇಟು:

ಜಾತ್ಯತೀತ ಜನತಾ ದಳವು ಮೂರನೇ ಅಭ್ಯರ್ಥಿಯನ್ನಾಗಿ ಮುಸ್ಲಿಮ್ ಸಮುದಾಯದ ಬಿ.ಎ.ಫಾರೂಕ್ ಅವರಿಗೆ ಟಿಕೆಟ್ ಕೊಟ್ಟಿದೆ. ಜೆಡಿಎಸ್​ನ ಈ ಮುಸ್ಲಿಮ್ ದಾಳಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಒಕ್ಕಲಿಗ ಅಸ್ತ್ರ ಪ್ರಯೋಗಿಸಿದ್ದಾರೆ. ಜಿ.ಸಿ.ಚಂದ್ರಶೇಖರ್ ಅವರನ್ನು ಮೂರನೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ ಜೆಡಿಎಸ್​ಗೆ ಕಾಂಗ್ರೆಸ್ ಎದಿರೇಟು ಕೊಟ್ಟಿದೆ.

ಬಿಜೆಪಿಯಿಂದ ರಾಜೀವ್‌ ಚಂದ್ರಶೇಖರ್

ಇನ್ನು ಬಿಜೆಪಿಯು ಉದ್ಯಮಿ ಹಾಗೂ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರಾಜೀವ್ ಚಂದ್ರಶೇಖರ್ ಅವರಿಗೆ ಮಣೆ ಹಾಕಿದೆ.

ಈ ಮೊದಲು ವಿಜಯ ಸಂಕೇಶ್ವರ, ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಗೌಡ,ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಪ್ರತಾಪ್ ಸಿಂಹ ನಾಯಕ್,‌ಮಾಜಿ ವಿಧಾನ ಪರಿಷತ್ ಸದಸ್ಯ ಶಂಕರಪ್ಪ, ನಿವೃತ್ತ ಕೆಪಿಎಸ್ ಸಿ ಸದಸ್ಯ ಡಾ‌ ನಾಗರಾಜ್ ಅವರುಗಳು ಹೆಸರು ಕೇಳಿ ಬಂದಿದ್ದವು.

ಆದರೆ , ಕೊನೆ ಕ್ಷಣದಲ್ಲಿ ಕೇಂದ್ರ ನಾಯಕರು ರಾಜೀವ್ ಚಂದ್ರಶೇಖರ್ ಗೆ ಟಿಕೇಟ್ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದೆ.

ರಾಜ್ಯದಿಂದ ರಾಜ್ಯಸಭೆಗೆ ಒಟ್ಟು ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷವು 3 ಸ್ಥಾನಗಳನ್ನು ಗೆಲ್ಲುವ ಸ್ಥಿತಿಯಲ್ಲಿದೆ. ಮಾ. 23ರಂದು ಚುನಾವಣೆ ನಡೆಯುತ್ತಿದೆ. ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ