ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಹಿಂದೂ ಸಂಘಟನೆ ಮೇಲೆ ಕೊಲೆ ಆರೋಪ: ಪ್ರಮೋದ್ ಮುತಾಲಿಕ್ ಆಕ್ರೋಶ

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಹಿಂದೂ ಸಂಘಟನೆ ಮೇಲೆ ಕೊಲೆ ಆರೋಪ: ಪ್ರಮೋದ್ ಮುತಾಲಿಕ್ ಆಕ್ರೋಶ
ಬೆಂಗಳೂರು, ಮಾ.9- ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ನವೀನ್‍ಕುಮಾರ್ ಎಂಬಾತ ಭಾಗಿಯಾಗಿದ್ದಾನೆಂದು ಹೇಳಿ ಹಿಂದೂ ಸಂಘಟನೆ ಮೇಲೆ ಕೊಲೆ ಆರೋಪ ಹೊರಿಸಲು ಸರ್ಕಾರ ಷಡ್ಯಂತ್ರ ರೂಪಿಸಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ನವೀನ್‍ಕುಮಾರ್ ಬಂಧನ ಖಂಡಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಗರದ ಮೌರ್ಯ ವೃತ್ತದಲ್ಲಿಂದು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನವೀನ್‍ಕುಮಾರ್‍ನನ್ನು ಅಕ್ರಮ ಶಸ್ತ್ರಾಸ್ತ್ರ ಮಾರಾಟದ ಆರೋಪದ ಮೇಲೆ ಬಂಧಿಸಲಾಗಿದೆ. ಆತನ ಸಹಚರರಾದ ಅನಿಲ್, ಅಭಿ, ಗಿರಿ ಎಂಬುವವರನ್ನು ಬಂಧಿಸಿದಾಗ ಯಾವುದೇ ಆರೋಪ ಮಾಡಿರಲಿಲ್ಲ. ಈಗ ಇವರು ಗೌರಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಇವರುಗಳನ್ನೆಲ್ಲ ಬಲಿಪಶು ಮಾಡಲು ಸರ್ಕಾರ ಹಾಗೂ ಪೆÇಲೀಸರು ಹೊರಟಿದ್ದಾರೆ ಎಂದು ದೂರಿದರು.
ಗೌರಿ ಹತ್ಯೆ ಮಾಡಿದವರು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಆದರೆ, ಹಿಂದೂ ಸಂಘಟನೆಗಳ ಮೇಲೆ ಸರ್ಕಾರ ಆರೋಪ ಹೊರಿಸುತ್ತಿದೆ. ಅಲ್ಪ ಸಂಖ್ಯಾತರನ್ನು ಓಲೈಕೆ ಮಾಡಲು ಮುಂದಾಗಿದೆ. ಸರ್ಕಾರಕ್ಕೆ ಜನರೇ ತಕ್ಕಪಾಠ ಕಲಿಸುತ್ತಾರೆ ಎಂದು ಹೇಳಿದರು.
ಮತ್ತೊಬ್ಬ ಹಿಂದೂ ಕಾರ್ಯಕರ್ತ ಮೋಹನ್‍ಗೌಡ ಮಾತನಾಡಿ, ಅಮಾಯಕರನ್ನು ಆರೋಪಿಗಳನ್ನಾಗಿ ಮಾಡಿರುವ ಪೆÇಲೀಸ್ ಇಲಾಖೆಗೆ ನಾಚಿಕೆಯಾಗಬೇಕು ಎಂದು ಗುಡುಗಿದರು.
ಇದು ಹೀಗೇ ಮುಂದುವರಿದರೆ ಹಿಂದೂ ಸಂಘಟನೆಯವರು ಎದ್ದು ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಸಿದರು. ನಮಗೆ ಯಾವುದೇ ಪಕ್ಷ ಮುಖ್ಯವಲ್ಲ. ಕಾಂಗ್ರೆಸ್ ಆಗಲಿ, ಜೆಡಿಎಸ್ ಆಗಲಿ, ಬಿಜೆಪಿ ಆಗಲಿ ನಮಗೆ ಹಿಂದೂ ಮುಖ್ಯ. ಬಜರಂಗದಳವಾಗಲಿ, ಮತ್ತಾವುದೇ ಹಿಂದೂಪರ ಸಂಘಟನೆಗಳವರ ಮೇಲೆ ದಾಳಿ ನಡೆದರೆ ನಾವು ಕೈ ಕಟ್ಟಿ ಕೂರುವುದಿಲ್ಲ ಎಂದು ಎಚ್ಚರಿಸಿದರು.
ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಆದರೆ, ಬಿಜೆಪಿ ಮುಖಂಡರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಮತ್ತಿತರರು ಸುಮ್ಮನೆ ಕೈ ಕಟ್ಟಿ ಕುಳಿತಿದ್ದಾರೆ ಎಂದು ಮೋಹನ್‍ಗೌಡ ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಹಲವಾರು ಹಿಂದೂಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ