ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಅಡ್ಡಿಯಾಗಿರುವ ಇನ್‍ಸ್ಪೆಕ್ಟರ್ ರಾಜ್ ವ್ಯವಸ್ಥೆಗೆ ಅಂತ್ಯ: ಎಚ್.ಡಿ.ಕುಮಾರಸ್ವಾಮಿ

ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಅಡ್ಡಿಯಾಗಿರುವ ಇನ್‍ಸ್ಪೆಕ್ಟರ್ ರಾಜ್ ವ್ಯವಸ್ಥೆಗೆ ಅಂತ್ಯ: ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಮಾ.8- ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜನರ ಆಶೀರ್ವಾದಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಅಡ್ಡಿಯಾಗಿರುವ ಇನ್‍ಸ್ಪೆಕ್ಟರ್ ರಾಜ್ ವ್ಯವಸ್ಥೆಗೆ ಅಂತ್ಯಹಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ನಗರದ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕಾಸಿಯಾ) ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಉದ್ಯಮಿಗಳಲ್ಲಿ ಸ್ನೇಹಿ ವಾತಾವರಣ ಮೂಡಿಸಲು ಕೈಗಾರಿಕೆ ನಿಯಮಗಳನ್ನು ಸರಳೀಕರಿಸಲಾಗುವುದು. ಅನಗತ್ಯ ಮಾರ್ಗ ಸೂಚಿಗಳ ಬದಲಾಗಿ ಬೆಳವಣಿಗೆಗೆ ಪೂರಕ ನೀತಿ ಪ್ರಕಟಿಸಲಾಗುವುದು. ನಾನಾ ರೀತಿಯ ಯೋಜನೆ, ಪೆÇ್ರೀ ನೆರವು ನೀಡುವ ಕಾರ್ಯಕ್ರಮಗಳನ್ನು ಕಾಲಮಿತಿಯಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದರು.
ಸಣ್ಣ ಕೈಗಾರಿಕೆಗಳ ಪೆÇ್ರೀ 500 ಕೋಟಿ ರೂ. ಮೊತ್ತದ ಆವರ್ತನ ನಿಧಿ ಸ್ಥಾಪಿಸಲಾಗುವುದು. ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಹೊಸ ಕೈಗಾರಿಕೆ ಟೌನ್‍ಶಿಪ್ ಸ್ಥಾಪನೆ, ಕೌಶಲ್ಯ ವಿವಿ ಆರಂಭ, ಕೈಗಾರಿಕಾ ಪ್ರದೇಶಗಳಿಗೆ ಮೂಲಸೌಕರ್ಯ ಹಾಗೂ ಮಹಿಳಾ ಉದ್ದಿಮೆದಾರರಿಗೆ ವಿಶೇಷ ನೆರವು ನೀಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಚಿಂತಿಸಲಾಗಿದೆ ಎಂದು ಹೇಳಿದರು.
ಭವಿಷ್ಯದಲ್ಲಿ ಸೌರ ವಿದ್ಯುತ್‍ಗೆ ಹೆಚ್ಚಿನ ಬೇಡಿಕೆ ಸಿಗಲಿದೆ. ಕಡಿಮೆ ವೆಚ್ಚದಲ್ಲಿ ಸೌರ ವಿದ್ಯುತ್ ಪಡೆದಲ್ಲಿ ರೈತರು ಹಾಗೂ ಕೈಗಾರಿಕೆಗೆ 24/7 ಮಾದರಿಯಲ್ಲಿ ವಿದ್ಯುತ್ ಪೂರೈಸಲು ಸಾಧ್ಯವಿದೆ. ಅಧಿಕಾರಕ್ಕೆ ಬಂದ 7 ತಿಂಗಳೊಳಗೆ ರಾಜ್ಯದ ವಿದ್ಯುತ್ ಯೋಜನೆಗಳನ್ನು ಪರಾಮರ್ಶಿಸಿ ಹೆಚ್ಚುವರಿ ವಿದ್ಯುತ್ ಉತ್ಪಾದಿಸಲು ವಿಶೇಷ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಣಕಾಸು ಕ್ರೊಢೀಕರಣಕ್ಕೆ ಒತ್ತು ನೀಡಿ ಲಭ್ಯ ಹಣದಲ್ಲೇ ಆಡಳಿತ ನಿರ್ವಹಣೆ ಮಾಡುವ ಹಣಕಾಸು ವ್ಯವಸ್ಥೆ ಜಾರಿಗೆ ತರುವ ಅಭಿಲಾಷೆ ಇದೆ ಎಂದು ಕುಮಾರಸ್ವಾಮಿ ವಿವರಿಸಿದರು.
ಕಾಸಿಯಾ ಅಧ್ಯಕ್ಷ ಆರ್.ಹನುಮಂತೇಗೌಡ ಮಾತನಾಡಿ, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದು, ಮುಚ್ಚುವ ಪರಿಸ್ಥಿತಿಗೆ ಬಂದಿವೆ. ಬಹುರಾಷ್ಟ್ರೀಯ ಕಂಪೆನಿಗಳು ಸಣ್ಣ ಕೈಗಾರಿಕೆಗಳನ್ನು ಹಿಡಿತದಲ್ಲಿಟ್ಟುಕೊಂಡು ವಿನಾಶದತ್ತ ಕೊಂಡೊಯ್ಯುತ್ತಿವೆ ಎಂದು ವಿಷಾದಿಸಿದರು.
ಕಾಸಿಯಾ ಪದಾಧಿಕಾರಿಗಳು 19 ಅಂಶ ಒಳಗೊಂಡ ಮನವಿಪತ್ರ ನೀಡಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಕಾಲಮಿತಿಯಲ್ಲಿ ಜಾರಿಗೆ ತರುವಂತೆ ಕುಮಾರಸ್ವಾಮಿಯವರಲ್ಲಿ ವಿನಂತಿಸಿದರು.
ಕಾಸಿಯಾದ ಪದಾಧಿಕಾರಿಗಳಾದ ಬಸವರಾಜ್ ಜವಳಿ, ಟಿ.ಎಸ್.ಉಮಾಶಂಕರ್, ಕೆ.ಎನ್.ನರಸಿಂಹಮೂರ್ತಿ, ಲತಾ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ