ದೇಶದ ರಾಜ್ಯಗಳಲ್ಲಿ ಕಳೆದ ಎರಡು ತಿಂಗಳಿನಲ್ಲಿ 98 ಚಿರತೆಗಳು ಮೃತಪಟ್ಟಿವೆ

ನೈನಿತಾಲ್, ಮಾ.6- ದೇಶದ ರಾಜ್ಯಗಳಲ್ಲಿ ಕಳೆದ ಎರಡು ತಿಂಗಳಿನಲ್ಲಿ 98 ಚಿರತೆಗಳು ಸಾವಿಗೀಡಾಗಿದ್ದು, ಪರಿಸರವಾದಿಗಳು ಮತ್ತು ಪ್ರಾಣಿಪ್ರಿಯರನ್ನು ಆತಂಕಕ್ಕೀಡು ಮಾಡಿದೆ. ಬಹುತೇಕ ಪ್ರಕರಣಗಳಲ್ಲಿ ಚರ್ಮ, ಉಗುರು, ಮೂಳೆಗಳು ಸೇರಿದಂತೆ ದೇಹದ ವಿವಿಧ ಭಾಗಗಳಿಗಾಗಿ ಬೇಟೆಗಾರರಿಂದ ಇವುಗಳನ್ನು ಕೊಲ್ಲಲಾಗಿರುವುದು ಕಳವಳಕಾರಿಯಾಗಿದೆ.
2018ರ ಮೊದಲ ಎರಡು ತಿಂಗಳಿನಲ್ಲಿ ದೇಶದ 18 ರಾಜ್ಯಗಳಲ್ಲಿ ಒಟ್ಟು 93 ಚಿರತೆಗಳು ಬಲಿಯಾಗಿವೆ. ಉತ್ತರಖಂಡ 24 ಚಿರತೆಗಳ ಸಾವಿನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ(18) ಮತ್ತು ರಾಜಸ್ತಾನ(11) ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿದೆ ಎಂದು ಭಾರತ ವನ್ಯಜೀವಿ ಸಂರಕ್ಷಣ ಸಂಘ (ಡಬ್ಲ್ಯುಪಿಎಸ್‍ಐ) ನೀಡಿರುವ ಅಂಕಿಅಂಶಗಳು ತಿಳಿಸಿವೆ.
ಎರಡು ತಿಂಗಳ ಅವಧಿಯಲ್ಲಿ 81 ಚಿರತೆಗಳನ್ನು ಬೇಟೆಯಾಡಿ ಕೊಲ್ಲಲಾಗಿದ್ದರೆ, 12 ಸ್ವಾಭಾವಿಕ ಕಾರಣಗಳಿಂದ ಅಸುನೀಗಿವೆ. 23 ಪ್ರಕರಣಗಳಲ್ಲಿ ಇವುಗಳ ತಲೆಬುರುಡೆಗಳು, ಉಗುರುಗಳು ಮತ್ತು ಮೂಳೆಗಳನ್ನು ವಶಪಡಿಸಿಕೊಳ್ಳಲಾಗಿವೆ ಎಂದು ಸಂಸ್ಥೆಯ ವನ್ಯಜೀವಿ ಸಂರಕ್ಷಣೆ ಕಾರ್ಯಕ್ರಮದ ಮುಖ್ಯಸ್ಥ ಟಿಟೊ ಜೋಸೆಫ್ ಹೇಳಿದ್ದಾರೆ.
ಈ ವರ್ಷದ ಜನವರಿ ಮತ್ತು ಫೆಬ್ರವರಿಯಲ್ಲಿ ವಾಹನಗಳು ಅಥವಾ ರೈಲು ಡಿಕ್ಕಿಯಿಂದ ಎಂಟು ಚಿರತೆಗಳು ಮೃತಪಟ್ಟಿವೆ. ಐದು ಚಿರತೆಗಳನ್ನು ಗ್ರಾಮಸ್ಥರು ಕೊಂದಿದ್ದರೆ, ಇತರ ಚಿರತೆಗಳೊಂದಿಗೆ ಕಾಳಗದಲ್ಲಿ ಏಳು ಸಾವಿಗೀಡಾಗಿವೆ. ಐದು ಚೀತಾಗಳು ಹುಲಿಗಳು ಮತ್ತು ಇತರ ಪ್ರಾಣಿಗಳ ದಾಳಿಯಿಂದ ಅಸುನೀಗಿವೆ. ಇನ್ನೆರಡು ರಕ್ಷಣಾ ಕಾರ್ಯಾಚರಣೆ ಅಥವಾ ಚಿಕಿತ್ಸೆ ವೇಳೆ ಕೊನೆಯುಸಿರೆಳೆದಿವೆ. ಒಂದು ವನ್ಯಜೀವಿ ವಿದ್ಯುತ್ ಆಘಾತದಿಂದ ಸತ್ತಿದ್ದರೆ, ಲಕ್ನೋದಲ್ಲಿ ಒಂದು ಚಿರತೆಯನ್ನು ಪೆÇಲೀಸ್ ಅಧಿಕಾರಿಯೊಬ್ಬರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಇದೇ ವೇಳೆ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ನಾಲ್ಕು ಚಿರತೆಗಳನ್ನು ರಕ್ಷಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ