ಹರಪನಹಳ್ಳಿ ತಾಲೂಕನ್ನು ಮರಳಿ ಬಳ್ಳಾರಿ ಜಿಲ್ಲೆಗೆ ಸೇರ್ಪಡೆ: ಹೈದರಾಬಾದ್ ಕರ್ನಾಟ ಹೋರಾಟ ಸಮಿತಿ ಬಳ್ಳಾರಿ ಘಟಕದ ಸಂಭ್ರಮ

ಹರಪನಹಳ್ಳಿ: ಮಾ-4: ಹರಪನಹಳ್ಳಿ ತಾಲೂಕನ್ನು ಮರಳಿ ಬಳ್ಳಾರಿ ಜಿಲ್ಲೆಗೆ ಸೇರಿಸುವುದಾಗಿ ಘೋಷಿಸಿ ರಾಜ್ಯ ಸರ್ಕಾರ ನ್ಯಾಯ ಒದಗಿಸಿಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿರುವ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೇರಿ ಪನ್ನರಾಜ್, ಈ ನಿಟ್ಟಿನಲ್ಲಿ ಹೋರಾಡಿದ ಶಾಸಕರನ್ನು ಸಮಿತಿ ಅಭಿನಂದಿಸುತ್ತದೆ ಎಂದು ತಿಳಿಸಿದ್ದಾರೆ.

371(ಜೆ) ಅನುಷ್ಠಾನದಲ್ಲಿ ಆಗುತ್ತಿರುವ ಅನ್ಯಾಯಗಳ ವಿರುದ್ಧವೂ ಹೋರಾಟ ನಡೆಸಬೇಕಿದೆ ಎಂಬ ಅಂಶವನ್ನು ಮರೆತರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ ಎಂದು ಕೂಡ ಇದೇವೇಳೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371(ಜೆ) ತಿದ್ದುಪಡಿ ಮೂಲಕ ಪ್ರಾದೇಶಿಕ ಮೀಸಲಾತಿಯನ್ನು ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಒದಗಿಸಲಾಗಿದೆ. ಬಳ್ಳಾರಿ ಜಿಲ್ಲೆಯೂ ಈ ಮೀಸಲಾತಿಗೆ ಒಳಪಟ್ಟಿದೆ. ಆದರೆ 21 ವರ್ಷಗಳ ಹಿಂದೆ ನೂತನ ದಾವಣಗೆರೆ ಜಿಲ್ಲೆ ಘೋಷಿಸಿದಾಗ ಬೌಗೋಳಿಕವಾಗಿ ಸಮೀಪ ಪ್ರದೇಶ ಎಂಬ ಕಾರಣಕ್ಕಾಗಿ ಹರಪನಹಳ್ಳಿ ತಾಲೂಕನ್ನು ಬಳ್ಳಾರಿ ಜಿಲ್ಲೆಯಿಂದ ದಾವಣಗೆರೆಗೆ ಸೇರಿಸಲಾಗಿತ್ತು.

ಡಾ.ನಂಜುಂಡಪ್ಪ ಸಮಿತಿ ವರದಿಯನ್ವಯ ಅತ್ಯಂತ ಹಿಂದುಳಿದ ತಾಲೂಕೆಂದು ಹರಪನಹಳ್ಳಿ ಪರಿಗಣಿಸಲಾಗಿದ್ದರೂ ಬಳ್ಳಾರಿ ಜಿಲ್ಲೆಯ ಭಾಗವಾಗಿರದ ಕಾರಣಕ್ಕೆ 371(ಜೆ) ಸೌಲಭ್ಯಗಳು ಹರಪನಹಳ್ಳಿ ತಾಲೂಕಿನ ಜನರಿಗೆ ಸಿಗುತ್ತಿರಲಿಲ್ಲ. 2013 ರಿಂದ ಹೋರಾಟಗಳು ನಡೆದರೂ ಯಶಕಾಣದ ಶಾಸಕ ಶ್ರೀ ಎಂ ಪಿ ರವೀಂದ ಅವರು ರಾಜೀನಾಮೆಗೂ ಮುಂದಾಗಿದ್ದರು. ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ನಿರ್ಧಾರವನ್ನು ತೆಗೆದುಕೊಂಡ ರಾಜ್ಯ ಸರ್ಕಾರ ಹರಪನಹಳ್ಳಿ ತಾಲೂಕನ್ನು ಮರಳಿ ಬಳ್ಳಾರಿ ಜಿಲ್ಲೆಗೆ ಸೇರಿಸುವುದಾಗಿ ಘೋಷಿಸಿದೆ. ಈ ನಿಟ್ಟಿನಲ್ಲಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಸಂತಸ ವ್ಯಕ್ತಪಡಿಸಿದೆ.

hydarabad-karnataka,harapanahalli,ballari

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ