ಜೂನಿಯರ್ ಸಿದ್ದರಾಮಯ್ಯ ಆಗಲು ಹೊರಟಿದ್ದಾರೆ ಎಂಬ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಹೇಳಿಕೆ

ಬೆಂಗಳೂರು, ಮಾ.3-ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅನುಕರಣೆ ಮಾಡುವ ಮೂಲಕ ಜೂನಿಯರ್ ಸಿದ್ದರಾಮಯ್ಯ ಆಗಲು ಹೊರಟಿದ್ದಾರೆ ಎಂಬ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಹೇಳಿಕೆ ಪಾಲಿಕೆ ಸಭೆಯಲ್ಲಿಂದು ಸ್ವಾರಸ್ಯಕರ ಮಾತುಕತೆಗೆ ಎಡೆಮಾಡಿಕೊಟ್ಟಿತು.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಎಂ.ಶಿವರಾಜ್, ಬಿಜೆಪಿ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳುತ್ತಿದ್ದರು. ಈ ವೇಳೆ ಪದ್ಮನಾಭರೆಡ್ಡಿ ಮಧ್ಯಪ್ರವೇಶಿಸಿ, ಈಗಷ್ಟೇ ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ ಬಂದಿದೆ. ಕಾಂಗ್ರೆಸ್ ವಾಶೌಟ್ ಆಗಿದೆ. ನಮ್ಮ ರಾಜ್ಯದಲ್ಲೂ ಇದೇ ಕತೆಯಾಗಲಿದೆ ಎಂದು ಮೂದಲಿಸಿದರು.
ಆಗ ಶಿವರಾಜ್ ಮಾತನಾಡಿ, ಮುಂದೇನೂ ನಮ್ಮ ಸರ್ಕಾರಾನೇ ಅಧಿಕಾರಕ್ಕೆ ಬರಲಿದೆ, ನಮ್ಮಪ್ಪನಾಣೆಗೂ ಬಿಜೆಪಿ ಬರಲ್ಲ ಎಂದು ಕಿಚಾಯಿಸಿದರು.
ನಮ್ಮ ತಾಯಾಣೆ ಕಾಂಗ್ರೆಸ್ ಬರಲ್ಲ ಎಂದು ಬಿಜೆಪಿಯವರು ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ಆಡಳಿತ ಪ್ರತಿಪಕ್ಷಗಳ ನಡುವೆ ವಾದ ನಡೆಯಿತು.
ಪದ್ಮನಾಭರೆಡ್ಡಿ ಮುಂದುವರೆದು ಮಾತನಾಡಿ, ಎಂ.ಶಿವರಾಜ್ ಅವರು ಸಿದ್ದರಾಮಯ್ಯನವರಂತೆ ಮಾತನಾಡುವ ಮೂಲಕ ಅವರನ್ನು ಅನುಸರಿಸುತ್ತಿದ್ದಾರೆ. ಜೂನಿಯರ್ ಸಿದ್ದರಾಮಯ್ಯ ಆಗ ಹೊರಟಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೇಯರ್ ಸಂಪತ್‍ರಾಜ್ ಮಾತನಾಡಿ, 13 ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರ ಕುರಿತು ಶಿವರಾಜ್ ಬಣ್ಣಿಸಿದ್ದಾರೆ. ಅದಕ್ಕೆ ನೀವು ಅವರನ್ನು ಸಿಎಂ ರನ್ನು ಅನುಸರಿಸುತ್ತಿದ್ದಾರೆ ಎಂದು ಕಾಲೆಳೆಯುತ್ತೀರಾ. ಸಿದ್ದರಾಮಯ್ಯ ಅವರ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಬೇಕು, ಹೀಗಳೆಯಬಾರದು ಎಂದು ಹೇಳುವ ಮೂಲಕ ವಾದ-ವಿವಾದಗಳಿಗೆ ತೆರೆ ಎಳೆದರು.
ನಂತರ ಬಜೆಟ್ ಮೇಲಿನ ಚರ್ಚೆ ಮುಂದುವರೆಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ