ರೈತ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚುನಾವಣೆಯಲ್ಲಿ ರೈತರು ತಕ್ಕ ಪಾಠ ಕಲಿಸಬೇಕು – ಎಚ್.ಡಿ.ಕೆ

ಕೆಆರ್ ಪೇಟೆ, ಮಾ.3- ಕಬ್ಬು ಮತ್ತು ಭತ್ತದ ನಾಡಾದ ಮಂಡ್ಯ ರೈತರಿಗೆ ಹುರುಳಿ ಬೆಳೆಯಿರಿ ಎಂದು ಪ್ರಕಟಣೆ ನೀಡಿರುವ ರೈತ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ರೈತರು ತಕ್ಕ ಪಾಠ ಕಲಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕುಮಾರ ಪರ್ವ ಸಮಾವೇಶ ಉದ್ಘಾಟಿಸಿ ಮಾತನಾಡಿದ ಕುಮಾರಸ್ವಾಮಿ ಅವರು, ಮಂಡ್ಯ ಜಿಲ್ಲೆಯ ರೈತರ ನಾಲೆಗಳಿಗೆ ಕೆಆರ್‍ಎಸ್‍ನಿಂದ ನೀರು ಹರಿಸದೆ ತೊಂದರೆ ಕೊಟ್ಟಿದ್ದಲ್ಲದೆ, ಮಾಧ್ಯಮಗಳ ಮೂಲಕ ಪ್ರಕಟಣೆ ನೀಡಿ ಭತ್ತ, ಕಬ್ಬು ಬೆಳೆಯದಂತೆ ಮಾಡಿ ರೈತರ ಆರ್ಥಿಕ ಪರಿಸ್ಥಿತಿ ಕೆಡುವಂತೆ ಮಾಡಿದ ರಾಜ್ಯ ಸರಕಾರಕ್ಕೆ ಜಿಲ್ಲೆಯ ಏಳೂ ಸ್ಥಾನಗಳನ್ನು ಜೆಡಿಎಸ್ ಶಾಸಕರನ್ನು ಗೆಲ್ಲಿಸುವ ಮೂಲಕ ತಮ್ಮ ಸ್ವಾಭಿಮಾನ ಎತ್ತಿ ಹಿಡಿಯಬೇಕು ಎಂದರು.

ದಕ್ಷಿಣ ಭಾರತದ ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ ಎಲ್ಲ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರ ನಡೆಸುತ್ತಿವೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಉತ್ತಮ ಆಡಳಿತಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಒಬ್ಬ ರೈತರ ಮನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೋಗಿ ಸಾಂತ್ವನ ಹೇಳಿಲ್ಲ. ಆದರೆ, ನಾನು ಅಂತಹ ರೈತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದೇನೆ. ನನಗೆ ನನ್ನ ರೈತರು ಮುಖ್ಯವೇ ಹೊರತು ಅಧಿಕಾರ ಮುಖ್ಯವಲ್ಲ. ರೈತರನ್ನು ಸಾಲಮುಕ್ತರನ್ನಾಗಿ ಮಾಡುವುದೇ ನನ್ನ ಮೊದಲ ಆದ್ಯೆತೆ ಎಂದು ಘೋಷಿಸಿದರು.

ಸಾಲಮನ್ನಾ ಮಾಡುವ ಘೋಷಣೆ ಮಾಡಿ ಏಳೆಂಟು ತಿಂಗಳು ಕಳೆದರೂ ಇದೂವರೆಗೂ ಸಿದ್ದರಾಮಯ್ಯ ಅವರು ರೈತರ ಖಾತೆಗಳಿಗೆ ಹಣ ಜಮಾ ಮಾಡಿಲ್ಲ. ಇನ್ನೇನು ಚುನಾವಣೆ ಘೋಷಣೆ ಕಾಲ ಸನ್ನಿಹಿತವಾಗುತ್ತದೆ. ಯಾವಾಗ ಸಾಲಮನ್ನಾ ಆಗುತ್ತದೆ ಎಂಬುದೇ ಕಾಣದಾಗಿದೆ. ನನ್ನ ಅಧಿಕಾರದ ಅವಧಿಯಲ್ಲಿ ಒಬ್ಬ ಮುಖ್ಯಮಂತ್ರಿ ಯಾವ ರೀತಿ ಕೆಲಸ ಮಾಡಬೇಕು ಎಂಬುದನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟಿದ್ದೆ. ಇದರಿಂದಾಗಿ ಮಾಧ್ಯಮಗಳು ನನ್ನ 20 ತಿಂಗಳ ಆಡಳಿತವನ್ನು ಸುವರ್ಣಯುಗವೆಂದು ಬಣ್ಣಿಸಿವೆ ಎಂದು ಕುಮಾರಸ್ವಾಮಿ ಹೇಳಿದರು.

ನನಗೆ ಅಧಿಕಾರ ಕೊಟ್ಟರೆ 70 ವರ್ಷ ತುಂಬಿದ ಎಲ್ಲ ಹಿರಿಯ ನಾಗರಿಕರಿಗೂ 5 ಸಾವಿರ ಮಾಸಾಶನ ನೀಡುತ್ತೇನೆ. ಗರ್ಭಿಣಿ ಮಹಿಳೆಯರನ್ನು ಅಂಗನವಾಡಿ ಕೇಂದ್ರಕ್ಕೆ ಕೇವಲ ಊಟಕ್ಕೆ ಹೋಗಬೇಕು ಎನ್ನುವ ಮಾತೃಪೂರ್ಣ ಯೋಜನೆ ರದ್ದು ಮಾಡಿ ಪ್ರತಿ ತಿಂಗಳು 6 ಸಾವಿರ ರೂ. ಭತ್ಯೆ ನೀಡಲಾಗುವುದು ಎಂದು ಕುಮಾರಸ್ವಾಮಿ ಭರವಸೆ ನೀಡಿದರು.

ಶಾಸಕ ಕೆ.ಸಿ.ನಾರಾಯಣಗೌಡ, ಸಂಸದ ಸಿ.ಎಸ್.ಪುಟ್ಟರಾಜು, ಮಾಜಿ ಸಂಸದ ಹೆಚ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ, ಮಾಜಿ ಶಾಸಕರಾದ ಬಿ.ಪ್ರಕಾಶ್, ಕೆ.ಸುರೇಶಗೌಡ, ಕೆ.ಅನ್ನದಾನಿ, ಎಲ್.ಆರ್.ಶಿವರಾಮೇಗೌಡ, ರಾಜ್ಯ ಮೈಸೂರು ಲ್ಯಾಂಪ್ಸ್ ಮಾಜಿ ಅಧ್ಯಕ್ಷ ಬಿ.ಎಲ್.ದೇವರಾಜು, ರಾಜ್ಯ ಬಿಎಸ್‍ಪಿ ಪ್ರಧಾನ ಕಾರ್ಯದರ್ಶಿ ಡಾ.ಎಂ.ಕೃಷ್ಣಮೂರ್ತಿ, ಎಂ.ಬಿ.ಶ್ರೀನಿವಾಸ್, ಮುಖಂಡರಾದ ಎಸ್.ಎಲ್.ರಮೇಶ್, ಬಸ್.ಕೃಷ್ಣೇಗೌಡ, ಡಾ.ಲಕ್ಷ್ಮೀ ಅಶ್ವಿನ್‍ಗೌಡ, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್, ಜಿಪಂ ಮಾಜಿ ಅಧ್ಯಕ್ಷೆ ಕೆ.ಪ್ರೇಮಕುಮಾರಿ, ಪ್ರಭಾರ ಅಧ್ಯಕ್ಷೆ ಗಾಯಿತ್ರಿ, ಸದಸ್ಯ ಹೆಚ್.ಟಿ.ಮಂಜು, ರಾಮದಾಸ್, ಚಿನಕುರುಳಿ ಅಶೋಕ್, ಚೋಳೇನಹಳ್ಳಿ ಪುಟ್ಟಸ್ವಾಮೀಗೌಡ, ಎಪಿಎಂಸಿ ಅಧ್ಯಕ್ಷ ಎಂ.ಪಿ.ಲೋಕೇಶ್, ನಿರ್ದೇಶಕ ಶಶಿಧರ್ ಸಂಗಾಪುರ, ತಾಪಂ ಉಪಾಧ್ಯಕ್ಷ ಜಾನಕೀರಾಂ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ವಿಜಯಕುಮಾರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಮೇಶ್, ತಾಲೂಕು ಅಧ್ಯಕ್ಷ ಆರ್.ವೆಂಕಟ ಸುಬ್ಬೇಗೌಡ ಮತ್ತಿತರರು ಭಾಗವಹಿಸಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ