ಗುಮಾಸ್ತ ಕೂಡ ದಾಖಲೆ ಇಲ್ಲದೆ ಆರೋಪ ಮಾಡುವುದಿಲ್ಲ; ಆದರೆ ಪ್ರಧಾನಿ ಮೋದಿ ಬಾಯಿಗೆ ಬಂದಂತೆ ಸುಳ್ಳು ಆರೋಪ ಮಾಡುತ್ತಿದ್ದಾರೆ: ಸಚಿವ ಕೆ.ಜೆ.ಜಾರ್ಜ್ ವಾಗ್ದಾಳಿ

ಬೆಂಗಳೂರು, ಮಾ.2-ದಾಖಲೆ ಇಲ್ಲದೆ ಗುಮಾಸ್ತ ಕೂಡ ಸುಳ್ಳು ಆರೋಪ ಮಾಡುವುದಿಲ್ಲ. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಾಯಿಗೆ ಬಂದಂತೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇನ್ನು ಪ್ರಕಾಶ್ ಜಾವಡೇಕರ್ ಗಾರೆ ಕೆಲಸಕ್ಕೆ ಬಂದವರಂತೆ ಮಾತನಾಡುತ್ತಿದ್ದಾರೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ವಾಗ್ದಾಳಿ ನಡೆಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಬಿಜೆಪಿಯವರು ಬಿಡುಗಡೆ ಮಾಡಿದ ಪುಸ್ತಕದ ಹಿನ್ನೆಲೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದರು.

ಹಿಟ್ಲರ್ ಆಡಳಿತದಲ್ಲಿ ಗೋಬೆಲ್ಸ್ ಎಂಬ ಮಾಹಿತಿ ಸಚಿವ ಇದ್ದ. ಆತ ಒಂದು ಸುಳ್ಳನ್ನು ನೂರು ಬಾರಿ ಸತ್ಯ ಎಂದು ವಾದಿಸುತ್ತಿದ್ದ. ಇಲ್ಲಿ ಬಿಜೆಪಿಯವರು ಅದೇ ಕೆಲಸ ಮಾಡುತ್ತಿದ್ದಾರೆ. ಮೇಲಿಂದ ಕೆಳಗಿನವರೆಗೂ ಎಲ್ಲಾ ಹಂತದ ಬಿಜೆಪಿ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸ್ಟೀಲ್‍ಬ್ರಿಡ್ಜ್ ಯೋಜನೆಯನ್ನು ರದ್ದುಮಾಡಿ ಒಂದು ವರ್ಷವಾಗಿದೆ. ಪ್ರಧಾನಿ ಅವರು ಅದರಲ್ಲಿ ರಾಜ್ಯ ಸರ್ಕಾರ ಕಮಿಷನ್ ಪಡೆದಿದೆ ಎಂದು ಆರೋಪ ಮಾಡುತ್ತಾರೆ. ಅವರ ಆರೋಪಕ್ಕೆ ದಾಖಲೆಗಳಿದ್ದರೆ ತೋರಿಸಬೇಕು. ಗುಮಾಸ್ತ ಕೂಡ ದಾಖಲೆ ಇಲ್ಲದೆ ಆರೋಪ ಮಾಡುವುದಿಲ್ಲ. ಪ್ರಧಾನಿ ಆದವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಸ್ಟೀಲ್ ಬ್ರಿಡ್ಜ್ ಯೋಜನೆ ಆರಂಭಿಸಿದ್ದು ಬಿಜೆಪಿ ಸರ್ಕಾರ. ನಮ್ಮ ಸರ್ಕಾರ ಜನರಿಗೆ ಸಂಚಾರ ದಟ್ಟಣೆಯಿಂದಾಗುವ ಸಮಸ್ಯೆ ತಪ್ಪಿಸಲು ಈ ಯೋಜನೆಯನ್ನು ಮುಂದುವರೆಸಿತು. ಅದಕ್ಕೆ ವಿರೋಧ ಮಾಡಿದವರ ಜತೆ ಸಭೆ ನಡೆಸಿದಾಗ ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ಈ ಯೋಜನೆ ಕೈಗೆತ್ತಿಕೊಳ್ಳಿ. ನಮ್ಮ ಅಭ್ಯಂತರವಿಲ್ಲ ಜನರಿಗೆ ಅನುಕೂಲವಾಗಲಿ ಎಂದು ಹೇಳಿದ್ದೆ. ಆದರೆ, ಅದಕ್ಕೆ ಅವರು ಉತ್ತರವೇ ನೀಡಲಿಲ್ಲ ಎಂದು ಹೇಳಿದರು.

ಬೆಳ್ಳಂದೂರು, ವರ್ತೂರು ಕೆರೆಗೆ ಸಾಕಷ್ಟು ಅನುದಾನ ಕೊಡುವುದಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿಕೆ ನೀಡಿದ್ದಾರೆ. ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದರೆ ಅನುದಾನ ಇಲ್ಲ ಎಂದು ಉತ್ತರ ನೀಡುತ್ತಾರೆ. ಗಾರೆ ಕೆಲಸದವರೂ ಈ ರೀತಿ ಮಾತನಾಡುವುದಿಲ್ಲ. ಇಂದು ಸಬ್‍ಹರ್ಬನ್ ರೈಲಿಗೆ 15ಸಾವಿರ ಕೋಟಿ ನೀಡುವುದಾಗಿ ಬಜೆಟ್‍ನಲ್ಲಿ ಘೋಷಣೆ ಮಾಡಿ ಇಂದು ಒಂದು ಕೋಟಿ ಮಾತ್ರ ಮೀಸಲಿಟ್ಟಿದ್ದಾರೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ