ಚುನಾವಣೆ ಕಾರಣಕ್ಕೆ ಜನರ ದಾರಿ ತಪ್ಪಿಸಲು ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ: ದಿನೇಶ್‍ಗುಂಡೂರಾವ್

ಬೆಂಗಳೂರು, ಮಾ.2-ಬಿಜೆಪಿ ಆಡಳಿತದಲ್ಲಿ ಬೆಂಗಳೂರಿಗೆ ಗಾರ್ಬೆಜ್ ಸಿಟಿ ಎಂಬ ಕೆಟ್ಟ ಹೆಸರು ಬಂದಿತ್ತು. ಕಸದ ಸಮಸ್ಯೆ ನಿವಾರಣೆ ಆಗಲಿಲ್ಲ. ಸರ್ಕಾರದ ಆಸ್ತಿ ಅಡಮಾನ ಇಟ್ಟರು. ಭ್ರಷ್ಟಾಚಾರ ತುಂಬಿ ತುಳುಕುತ್ತಿತ್ತು, ಈಗ ಅವರು ಬೆಂಗಳೂರು ರಕ್ಷಿಸಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ವ್ಯಂಗ್ಯವಾಡಿದರು.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ಅಶೋಕ್ ಅವರ ಅಧ್ಯಕ್ಷತೆಯ ಭೂ ಮಂಜೂರಾತಿ ಸಮಿತಿ ಸಾವಿರಾರು ಎಕರೆಯನ್ನು ಮನಸೋಇಚ್ಚೆ ಮಂಜೂರು ಮಾಡಿತ್ತು. ನಮ್ಮ ಸರ್ಕಾರ ಒತ್ತುವರಿ ಭೂಮಿಯನ್ನು ತೆರವು ಮಾಡಿದೆ. ಕಸದ ಸಮಸ್ಯೆ ನಿವಾರಣೆ ಮಾಡಿದೆ. ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿದೆ. ಬಿಜೆಪಿಯವರಿಗೆ ಸುಳ್ಳು ಹೇಳುವುದು ಬಿಟ್ಟು ಏನೂ ಗೊತ್ತಿಲ್ಲ. ಜೈಲಿಗೆ ಹೋಗಿ ಬಂದವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ಯಡಿಯೂರಪ್ಪನವರ ಡಿನೋಟಿಫಿಕೇಷನ್ ಹಗರಣಗಳು, ಕಟ್ಟಾಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯಶೆಟ್ಟಿ ಅವರ ಭೂ ಹಗರಣಗಳು ಈಗಲೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ನಮ್ಮ ಸರ್ಕಾರದ ಅವಧಿಯಲ್ಲಿ ಇಂಥ ಒಂದು ಹಗರಣವನ್ನು ತೋರಿಸಲು ಬಿಜೆಪಿಯವರಿಗೆ ಸಾಧ್ಯವಾಗಿಲ್ಲ. ನಾವು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಚುನಾವಣೆ ಕಾರಣಕ್ಕೆ ಜನರ ದಾರಿ ತಪ್ಪಿಸಲು ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ ಎಂದು ತಿರುಗೇಟು ನೀಡಿದರು.

ಅಪರಾಧಗಳ ಸಂಖ್ಯೆ ನಮ್ಮ ಸರ್ಕಾರದ ಅವಧಿಯಲ್ಲಿ ಇಳಿಮುಖವಾಗಿದೆ. ದೇಶ ಟಾಪ್ 10 ಕ್ರೈಂ ಸಿಟಿಗಳಲ್ಲಿ ಬೆಂಗಳೂರು ಇಲ್ಲ. ಬದಲಾಗಿ ಬೆಂಗಳೂರಿಗೆ ಕ್ರಿಯಾಶೀಲ ನಗರ ಹಾಗೂ ನವೋದ್ಯಮಿಗಳ ರಾಜಧಾನಿ ಎಂಬ ಹೆಸರು ಬಂದಿದೆ. ಬಿಜೆಪಿಯವರಿಗೆ ಆರೋಪ ಮಾಡಲು ವಿಷಯಗಳಿಲ್ಲವೆ? ಸುಳ್ಳು ಸುಳ್ಳು ಮಾಹಿತಿಗಳನ್ನು ಜನರಿಗೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ