ಘನತ್ಯಾಜ್ಯ ನಿರ್ವಹಣೆಯಲ್ಲಿ ಬಿಬಿಎಂಪಿ ವಿಫಲ: ಶಾಸಕ ಡಾ.ಅಶ್ವತ್ಥನಾರಾಯಣ ಆರೋಪ

ಬೆಂಗಳೂರು, ಮಾ.2- ಬಿಬಿಎಂಪಿಯು ಘನತ್ಯಾಜ್ಯ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದ್ದು, ಸತ್ಯಕ್ಕೆ ದೂರವಾದ ಅಂಕಿ-ಅಂಶಗಳನ್ನು ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಶಾಸಕ ಡಾ.ಅಶ್ವತ್ಥನಾರಾಯಣ ಆರೋಪಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಬಿಎಂಪಿ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ 1143ಟನ್ ಹಸಿ ಕಸ ಉತ್ಪತ್ತಿಯಾಗುತ್ತಿದೆ. ವಿಲೇವಾರಿ ಘಟಕಗಳಿಗೆ ಕೇವಲ 350ರಿಂದ 450 ಟನ್ ಮಾತ್ರ ರವಾನಿಯಾಗುತ್ತಿದ್ದು, ಉಳಿದ ಹಸಿಕಸ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿದರು.

ಹೀಗಾಗಿ ಅಧಿಕಾರಿಗಳು ನೀಡಿರುವ ಅಂಕಿ-ಅಂಶಗಳು ತಪ್ಪಾಗಿವೆ. ಅಧಿಕಾರಿಗಳು ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.

ಬಿಬಿಎಂಪಿ ಅಧಿಕಾರಿಗಳು ನೀಡಿರುವ ಕಸ ವಿಂಗಡಣೆ ಸಮೀಕ್ಷೆ ಪ್ರಕಾರ ಶೇ.75ರಷ್ಟು ಹಸಿ ಕಸ ಉತ್ಪಾದನೆಯಾಗುತ್ತಿದೆ. ಆದರೆ, ವಿಲೇವಾರಿ ಘಟಕಗಳಿಗೆ ಹೋಗುತ್ತಿರುವುದು ಮಾತ್ರ ತೀರಾ ಕಡಿಮೆ ಇದೆ. ಅಂಕಿ-ಅಂಶಗಳಿಗೂ ವಾಸ್ತವಕ್ಕೂ ತಾಳೆಯಾಗುತ್ತಿಲ್ಲ ಎಂದು ಆರೋಪಿಸಿದರು.

ಬಿಬಿಎಂಪಿ ಕಸ ವಿಂಗಡಣೆ ಪ್ರಮಾಣದ ಸಮೀಕ್ಷೆಗೆ ಸಂಬಂಧಿಸಿದಂತೆ ರ್ಯಾಂಕಿಂಗ್ ನೀಡಿದ್ದು, ನಗರದ ಐದು ವಾರ್ಡ್‍ಗಳಲ್ಲಿ ಶೇ.80ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಸ ವಿಂಗಡಣೆಯಾಗುತ್ತಿದೆ. ಬೊಮ್ಮನಹಳ್ಳಿ, ದಾಸರಹಳ್ಳಿ, ಯಲಹಂಕ ವಲಯದಲ್ಲಿ ಶೇ.60ಕ್ಕಿಂತ ಹೆಚ್ಚು ಕಸ ವಿಂಗಡಣೆಯಾದರೆ, ಆರ್.ಆರ್.ನಗರ, ಬೆಂಗಳೂರು ದಕ್ಷಿಣ, ಪಶ್ಚಿಮ, ಪೂರ್ವ ಹಾಗೂ ಮಹದೇವಪುರ ವಲಯದಲ್ಲಿ ಶೇ.40ರಿಂದ 60ರಷ್ಟು ಕಸ ವಿಂಗಡಣೆಯಾಗುತ್ತಿದೆ ಎಂದರು.

ಕಸ ವಿಲೇವಾರಿ ಘಟಕಗಳು ಬಂದಾಗಿಬಿಟ್ಟಿವೆ. ಕನ್ನಹಳ್ಳಿಯಲ್ಲಿ ಘಟಕ ಸಂಪೂರ್ಣ ಸ್ಥಗಿತವಾಗಿದೆ. ಸಿಗೆಹಳ್ಳಿಯಲ್ಲಿ ಕಸ ವಿಂಗಡಣೆ ಕಾರ್ಯ ನಡೆದಿಲ್ಲ. ಚಿಕ್ಕನಾಗಮಂಗಲ, ಸುಬ್ಬರಾಯನಪಾಳ್ಯ, ಲಿಂಗದೇವರಹಳ್ಳಿಯಲ್ಲೂ ಕೂಡ ಘಟಕಗಳು ಬಂದಾಗಿವೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ