ನವದೆಹಲಿ:ಫೆ-27: ಹಿರಿಯ ನಟಿ ಶ್ರೀದೇವಿ ಅವರ ಸಾವು ಹಲವಾರು ಸಂಯಗಳಿಗೆ ಎಡೆಮಾಡಿಕೊಟ್ಟಿದ್ದು, ಈ ನಡುವೆ ಬಿಜೆಪಿ ಹಿರಿಯ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಶ್ರೀದೇವಿ ಅವರನ್ನು ಬಹುಶ: ಹತ್ಯೆ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಶ್ರೀದೇವಿಗೆ ಮದ್ಯ ಸೇವಿಸುವ ಅಭ್ಯಾಸ ಇರಲಿಲ್ಲ. ಹೀಗಿರುವಾಗ ದುಬೈ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಶ್ರೀದೇವಿ ದೇಹದಲ್ಲಿ ಮದ್ಯದ ಅಂಶವಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಅಂಶದ ಮೇಲೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀದೇವಿಗೆ ಬಲವಂತವಾಗಿ ಮದ್ಯಪಾನ ನೀಡಲಾಗಿದೆಯೇ ಎಂಬುದು ಗೊತ್ತಾಗಬೇಕಿದೆ ಎಂದಿದ್ದಾರೆ.
ಶ್ರೀದೇವಿ ಅವರಿಗೆ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ಇತ್ತು. ಅವರು ಆಲ್ಕೋಹಾಲ್ ಸೇವಿಸುತ್ತಿರಲಿಲ್ಲ. ಶ್ರೀದೇವಿಯನ್ನು ಹತ್ಯೆ ಮಾಡಲಾಗಿದೆ ಎಂಬ ಅನುಮಾನ ತನಗೆ ಉಂಟಾಗುತ್ತಿದೆ. ಅಲ್ಲದೇ ಈ ಘಟನೆಯಲ್ಲಿ ಸಿಸಿಟಿವಿ ದೃಶ್ಯಾವಳಿಗಳು ಏನಾದವು ಎಂದು ಅವರು ಪ್ರಶ್ನಿಸಿದ್ದಾರೆ.
ಬಾತ್ ಟಬ್ನಲ್ಲಿ ಮುಳುಗಿ ಸಾಯುವುದು ಅಸಾಧ್ಯ. ಒಂದು ವೇಳೆ ಯಾರಾದರೂ ತಳ್ಳಿದರೆ ಅಥವಾ ಉಸಿರುಗಟ್ಟಿಸಿದರೆ ಮಾತ್ರ ಸಾಯಲು ಸಾಧ್ಯ. ಹೃದಯಾಘಾತದಿಂದ ಮೃತಪಟ್ಟರು ಎಂಬುದನ್ನು ಮುಂದಾಲೋಚನೆಯ ಭಾಗವಾಗಿ ಘೋಷಿಸಲಾಗಿದೆ. ಅಷ್ಟೇ ಅಲ್ಲದೆ ಸಿನಿಮಾ ತಾರೆಗಳಿಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೂ ಸಂಬಂಧಗಳಿವೆಯೆಂದು, ಈ ಕಡೆಯೂ ಸ್ವಲ್ಪ ಗಮನಹರಿಸಬೇಕೆಂದು ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದ್ದಾರೆ. ಒಟ್ಟಾರೆ ಸುಬ್ರಹ್ಮಣ್ಯ ಸ್ವಾಮಿ ಹೇಳಿಕೆ ಶ್ರೀದೇವಿ ಸಾವಿನ ಕುರಿತು ಹೊಸ ತಿರುವು ಪಡೆದುಕೊಳ್ಳಲಿದೆಯೇ ಕಾದುನೋಡಬೇಕಿದೆ.
Sridevi’s death, probable murder,BJP,Subramanian Swamy