ಕೌಶಲ್ಯರಹಿತ ಸಿಬ್ಬಂದಿಗೆ 11,500 ಕನಿಷ್ಟ ವೇತನ ನಿಯಮಕ್ಕೆ ಮಧ್ಯಂತರ ತಡೆಯಾಜ್ಞೆ

ಬೆಂಗಳೂರು, ಫೆ.27- ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುವ ಕೌಶಲ್ಯರಹಿತ ಸಿಬ್ಬಂದಿಗೆ 11,500 ಕನಿಷ್ಟ ವೇತನ ನೀಡಬೇಕೆಂಬ ಸರ್ಕಾರದ ನಿಯಮಕ್ಕೆ ಕಾರ್ಮಿಕ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ.
11,500 ಕನಿಷ್ಟ ವೇತನವನ್ನುಕೌಶಲ್ಯರಹಿತ ಕಾರ್ಮಿಕರಿಗೆ ನೀಡಬೇಕೆಂದು ಕಾನೂನು ರೂಪಿಸಿದ್ದ ಸರ್ಕಾರದ ಕ್ರಮ ವಿರೋಧಿಸಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ನ್ಯಾಯಾಲಯದ ಮೊರೆ ಹೋಗಿತ್ತು.
8 ರಿಂದ 9 ಸಾವಿರ ರೂ.ಗಳ ವೇತನವನ್ನು ನೀಡಬಹುದಾಗಿದ್ದು, 11,500 ವೇತನ ನೀಡುವುದು ಹೊರೆಯಾಗುತ್ತದೆ ಎಂಬ ವಾದವನ್ನು ನ್ಯಾಯಾಲಯದ ಮುಂದೆ ಮಂಡಿಸಿತ್ತು. ವಾದ ಆಲಿಸಿದ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಸಣ್ಣ ಕೈಗಾರಿಕೆಗಳ ಸಂಘಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ ಎಂದು ಸಂಘದ ಅಧ್ಯಕ್ಷ ಹನುಮಂತೇಗೌಡ ತಿಳಿಸಿದ್ದಾರೆ.
ನವದೆಹಲಿಯಲ್ಲಿರುವ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ಸಾವಿರಾರು ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿದ್ದು, ಲಕ್ಷಾಂತರ ಕೌಶಲ್ಯ ರಹಿತ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರ ರೂಪಿಸಿದಂತೆ ಎಲ್ಲ ಸಿಬ್ಬಂದಿಗೂ 11,500ರೂ. ಕನಿಷ್ಟ ವೇತನ ನೀಡಲು ಸಾಧ್ಯವಾಗುವುದಿಲ್ಲ. ಇದನ್ನು ವಿರೋಧಿಸಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ ಎಂದು ಹೇಳಿದರು.
ಅಲ್ಲದೆ, ಸಣ್ಣ ಕೈಗಾರಿಕೆ ಮತ್ತು ಸೂಕ್ಷ್ಮ ಕೈಗಾರಿಕೆ (ಎಂಎಸ್‍ಎಂಇ)ಗಳ ಮೇಲಿನ ತೆರಿಗೆ ಪ್ರಮಾಣವನ್ನು ಇಳಿಸುವುದಾಗಿ ಕೇಂದ್ರ ಸಚಿವ ಗಿರಿರಾಜ್ ಅವರು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕೈಗಾರಿಕಾ ಉತ್ಪನ್ನಗಳ ಮೇಲೆ ಶೇ.18 ರಿಂದ 28ರಷ್ಟು ತೆರಿಗೆ ವಿಧಿಸಲಾಗಿದ್ದು, ಶೇ.18ರಷ್ಟಿರುವ ತೆರಿಗೆಯನ್ನು ಶೇ.5ರಷ್ಟಕ್ಕೆ ಇಳಿಸುವ ಬಗ್ಗೆ ಮತ್ತು ಶೇ.28ರಷ್ಟು ತೆರಿಗೆಯನ್ನು ಕೂಡ ಇಳಿಕೆ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಣ್ಣ ಕೈಗಾರಿಕೆಗಳ ಮೇಲೆ ಲಕ್ಷಾಂತರ ಜನ ಅವಲಂಬಿತರಾಗಿದ್ದು, ತೆರಿಗೆ ಪ್ರಮಾಣ ಇಳಿಸುವುದರಿಂದ ಉದ್ಯಮಿಗಳಲ್ಲದೆ, ಅವಲಂಬಿತರಿಗೂ ಸಾಕಷ್ಟು ಅನುಕೂಲವಾಗಲಿದೆ. ಅಲ್ಲದೆ, ರಾಜ್ಯ ಹಾಗೂ ದೇಶದ ಆರ್ಥಿಕ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ