ಪಿಯುಸಿ-ಎಸ್‍ಎಸ್‍ಎಲ್‍ಸಿ ಪ್ರಶ್ನೆಪತ್ರಿಕೆಗಳನ್ನು ಅಂತರ್ಜಾಲದಲ್ಲಿ ಕಳುಹಿಸುವುದು, ಸ್ವೀಕರಿಸುವುದು ಅಪರಾಧ

ಬೆಂಗಳೂರು, ಫೆ.23-ಪಿಯುಸಿ-ಎಸ್‍ಎಸ್‍ಎಲ್‍ಸಿ ಪ್ರಶ್ನೆಪತ್ರಿಕೆಗಳನ್ನು ಅಂತರ್ಜಾಲದಲ್ಲಿ ಕಳುಹಿಸುವುದು, ಸ್ವೀಕರಿಸುವುದು ಮತ್ತು ಅದನ್ನು ಸಂರಕ್ಷಿಸಿಟ್ಟುಕೊಳ್ಳುವುದು ಅಪರಾಧವಾಗಿದ್ದು, ಅಂತಹ ಪ್ರಕರಣಗಳು ಕಂಡು ಬಂದರೆ ಮೊಬೈಲ್ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಪರೀಕ್ಷೆ ಕುರಿತು ಹೊರತರಲಾದ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಬಾರಿ ಯಾವುದೇ ಗೊಂದಲಗಳಿಲ್ಲದಂತೆ ಎಸ್‍ಎಸ್‍ಎಲ್‍ಸಿ-ಪಿಯುಸಿ ಪರೀಕ್ಷೆ ನಡೆಸಲು ಮುಂಜಾಗ್ರತೆಯಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಶ್ನೆಪತ್ರಿಕೆ ಬಹಿರಂಗ ಸೇರಿದಂತೆ ಯಾವ ಅವಾಂತರಗಳು ನಡೆಯದೆ ಉತ್ತಮ ರೀತಿಯಲ್ಲಿ ಪರೀಕ್ಷೆ ನಡೆಸಿ ಪೆÇೀಷಕರು ಮತ್ತು ವಿದ್ಯಾರ್ಥಿಗಳಲ್ಲಿನ ಆತಂಕ ದೂರ ಮಾಡಲಾಗುವುದು ಎಂದರು.

ವಾಟ್ಸಪ್‍ಗಳಲ್ಲಿ ಪ್ರಶ್ನೆಪತ್ರಿಕೆಗಳು ಹರಿದಾಡುವ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ಅಸಲಿ ಅಥವಾ ನಕಲಿ ಪ್ರಶ್ನೆಪತ್ರಿಕೆಯಾಗಲಿ, ಇಲ್ಲವೆ ಪ್ರಶ್ನೆಪತ್ರಿಕೆ ಮಾದರಿಯ ಯಾವುದೇ ವಿಷಯಗಳನ್ನು ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ರವಾನಿಸುವುದು ಅಪರಾಧವಾಗಿದೆ. ಒಂದು ವೇಳೆ ಸ್ವೀಕರಿಸಿದವರು ತಕ್ಷಣವೇ ಹತ್ತಿರದ ಪೆÇಲೀಸ್ ಠಾಣೆಗೆ ದೂರು ನೀಡಬೇಕು, ದೂರು ನೀಡದೆ ಸಂರಕ್ಷಿಸಿಟ್ಟುಕೊಂಡರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಿಯು ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರ ವೇತನದಲ್ಲಿ ತಾರತಮ್ಯವಿರುವುದು ಸರ್ಕಾರದ ಗಮನದಲ್ಲಿದೆ. ಅದನ್ನು ಸರಿದೂಗಿಸಲು ನಾನು ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ನನ್ನ ಶ್ರಮದ ಬಗ್ಗೆ ಪ್ರಾಂಶುಪಾಲರಿಗೆ ಮತ್ತು ಉಪನ್ಯಾಸಕರಿಗೆ ಅರಿವಿದೆ. ಈಗಾಗಲೇ ಒಂದು ವೇತನ ಬಡ್ತಿ ಮತ್ತು ಎಕ್ಸ್‍ಗ್ರೇಷಿಯಾ ನೀಡಲಾಗಿದೆ. ಮುಂದಿನ ಭಾಗವಾಗಿ ಆರನೇ ವೇತನ ಆಯೋಗದ ವರದಿ ಅನುಸಾರ ಕ್ರಮ ಕೈಗೊಳ್ಳಲಾಗುವುದು, ವೇತನ ಆಯೋಗ 2ನೇ ಹಂತದಲ್ಲಿ ಅಂತಿಮ ವರದಿ ನೀಡಿದ ಬಳಿಕ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಪರೀಕ್ಷೆಯನ್ನು ಯಾವುದೇ ಆತಂಕ, ಭಯ ಇಲ್ಲದೆ ಎದುರಿಸಲು ಸರ್ಕಾರ ಸಾಕಷ್ಟು ವ್ಯವಸ್ಥೆ ಮಾಡಿದೆ. ಐದು ದಿನಗಳ ಮೊದಲೇ ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ಪ್ರಕಟಿಸಲಾಗಿದೆ. ಪ್ರಾಂಶುಪಾಲರ ಸಂಘ ಪರೀಕ್ಷೆಯನ್ನು ಹೇಗೆ ಎದುರಿಸಬೇಕು, ಅದರಲ್ಲೂ ಗಣಿತ ಮತ್ತು ವಿಜ್ಞಾನ ವಿಷಯದ ಪರೀಕ್ಷೆ ಎದುರಿಸುವ ಬಗ್ಗೆ ಅತ್ಯಂತ ಸರಳೀಖರಣ ವಿಧಾನಗಳನ್ನು ಈ ಕಿರುಹೊತ್ತಿಗೆಯಲ್ಲಿ ಅಳವಡಿಸಿದ್ದಾರೆ.

ಹಿಂದಿನ ವರ್ಷದ ಫಲಿತಾಂಶ ಮತ್ತು ಪರೀಕ್ಷೆ ಅನುಭವ ಆಧರಿಸಿ ಕಿರುಹೊತ್ತಿಗೆ ತಯಾರಿಸಿರುವುದು ಶ್ಲಾಘನೀಯ. ವಿದ್ಯಾರ್ಥಿಗಳಿಗೆ ಇದರಿಂದ ಬಹಳಷ್ಟು ಅನುಕೂಲವಾಗಲಿದೆ. ಪರೀಕ್ಷೆ ವೇಳೆ ಆತಂಕದಿಂದ ವಿದ್ಯಾರ್ಥಿಗಳು ಪ್ರಶ್ನೆಗಳಿಗೆ ಉತ್ತರ ಬರೆಯಲಾಗದೆ ಗೊಂದಲಕ್ಕೆ ಸಿಲುಕುತ್ತಾರೆ. ಕಷ್ಟದ ಪ್ರಶ್ನೆಗಳನ್ನು ಮುಟ್ಟಲು ಹೋಗುವುದಿಲ್ಲ. ಹೀಗಾಗಿ ಅನುತ್ತೀರ್ಣರಾಗುವುದು ಸಾಮಾನ್ಯವಾಗಿದೆ. ಅಂತಹ ವಾತಾವರಣ ತಪ್ಪಿಸಲು ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರಿಂದ ಸಮಗ್ರ ಮಾಹಿತಿ ನೀಡುತ್ತಿರುವುದು ಮೆಚ್ಚುವಂತ ಹುದ್ದೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ನನಗೆ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸಿದ್ದಾರೆ. ಅವರ ವಿರುದ್ಧ ಮುಖ್ಯಮಂತ್ರಿಗಳಿಗೆ ದೂರು ನೀಡುವುದಾಗಿ ಸಚಿವ ತನ್ವೀರ್ ಸೇಠ್ ಹೇಳಿದರು.

ಖಾಸಗಿ ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳುವ ವಿಷಯದಲ್ಲಿ ನನಗೆ ನೀಡಿದ ಮಾಹಿತಿ ಬೇರೆ, ಅದರಲ್ಲಿರುವ ಅಂಶಗಳೇ ಬೇರೆ. ಅಧಿಕಾರಿಗಳು ತಾವು ಮಾಡಿದ್ದೇ ಸರಿ ಎಂದುಕೊಂಡಿದ್ದಾರೆ. ನನ್ನ ಗಮನಕ್ಕೆ ಬಾರದೆ ಕೆಲವು ನಿರ್ಣಯಗಳಾಗಿವೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಈಗಾಗಲೇ ಆಗಿರುವ ಒಪ್ಪಂದವನ್ನು ರದ್ದುಪಡಿಸಲಾಗುವುದು. ಸರ್ಕಾರಕ್ಕೆ ವಿದ್ಯಾರ್ಥಿಗಳ ಮತ್ತು ಪೆÇೀಷಕರ ಹಿತ ಮುಖ್ಯ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ