ಮೆಗಾಸ್ಟಾರ್ ಅಮಿತಾಭ್ ಬಚ್ಚನ್‍ರ ಇತ್ತೀಚಿನ ನಡವಳಿಕೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ

ನವದೆಹಲಿ, ಫೆ.22-ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್‍ರ ಇತ್ತೀಚಿನ ನಡವಳಿಕೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಬಿಗ್-ಬಿ ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಧುರೀಣರನ್ನು ಟ್ವಿಟರ್‍ನಲ್ಲಿ ಫಾಲೋ ಮಾಡುತ್ತಿದ್ದಾರೆ. ಇದರಿಂದಾಗಿ ಹಿರಿಯ ಅಭಿನೇತ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಊಹಾಪೊಹಾಗಳೂ ಹಬ್ಬಿವೆ.

ರಾಹುಲ್, ಪಿ.ಚಿದಂಬರಂ, ಕಪಿಲ್ ಸಿಬಲ್, ಅಹಮದ್ ಪಟೇಲ್, ಅಶೋಕ್ ಗೆಲ್ಹೋಟ್, ಅಜಯ್ ಮಕೆನ್, ಜೋತಿರಾದಿತ್ಯ ಸಿಂಧ್ಯಾ, ಸಚಿನ್ ಪೈಲೆಟ್, ಸಿ.ಪಿ.ಜೋಶಿ, ಮನಿಶ್ ತಿವಾರಿ, ಶಕೀಲ್ ಅಹಮದ್, ಸಂಜಯ್ ನಿರುಪಮ್ ರಣದೀಪ್ ಸುರ್ಜೆವಾಲಾ, ಪ್ರಿಯಾಂಕ ಚತುರ್ವೇದಿ, ಸಂಜಯ್ ಜಾ ಮೊದಲಾದ ಕಾಂಗ್ರೆಸ್ ನಾಯಕರೊಂದಿಗೆ ಟ್ವೀಟ್ ಮತ್ತು ಮೈಕ್ರೋಬ್ಲಾಗ್‍ನಲ್ಲಿ ಅನುಸರಿಸಿ ಬಿಗ್-ಬಿ ಪ್ರತಿಕ್ರಿಯೆಗಳನ್ನು ನೀಡುತ್ತಿರುವುದು ಬಿಜೆಪಿ ಮತ್ತು ಇತರ ಪಕ್ಷಗಳು ಹುಬ್ಬೇರುವಂತೆ ಮಾಡಿದೆ.

ಕೆಲವು ದಿನಗಳಿಂದ ಬಿಗ್‍ಬಿಗೆ ಕಾಂಗ್ರೆಸ್ ಬಗ್ಗೆ ದಿಢೀರ್ ಪ್ರೇಮ ಬರಲು ಕಾರಣವೇನು ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಅಮಿತಾಭ್ ಕೆಲಕಾಲ ಸಮಾಜವಾದಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ, ಇವರು ನೆಹರು-ಗಾಂಧಿ ಕುಟುಂಬದ ಪರಮಾಪ್ತರು. ಅಲ್ಲದೇ ರಾಜೀವ್ ಗಾಂಧಿಗೆ ಆಪ್ತಮಿತ್ರರಾಗಿದ್ದರು. ಪ್ರಸ್ತುತ ಗುಜರಾತ್ ರಾಜ್ಯದ ಪ್ರಚಾರ ರಾಯಭಾರಿ ಆಗಿರುವ ಬಚ್ಚನ್ 33 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಟ್ವಿಟರ್‍ನಲ್ಲಿ ಹೊಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ