ಪೇಜಾವರಮಠದ ಶ್ರೀವಿಶ್ವೇಶ್ವರತೀರ್ಥರ ಹೃದಯ ವೈಶಾಲ್ಯ

ಉಡುಪಿ: ಪೇಜಾವರಮಠದ ಶ್ರೀವಿಶ್ವೇಶ್ವರತೀರ್ಥ ಶ್ರೀಪಾದರನ್ನು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಶ್ರೀಗಳು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು.

ರಾಘವೇಶ್ವರ ಶ್ರೀಗಳು ಭೇಟಿಗೆ ಹೋಗಿದ್ದಾಗ, ನೀವು ಕುಳಿತಿರುವಾಗ, ನಾವು ಕುಳಿತು ಮಾತನಾಡಲಾಗುತ್ತಿಲ್ಲ. ಅನಿವಾರ್ಯವಾಗಿ ಮಲಗಿರಬೇಕಾದ ಸ್ಥಿತಿ ಇದೆ. ‘ಅಪಚಾರವಾಯಿತು’… ಎನ್ನುವ ಔದಾರ್ಯದ ಮಾತನ್ನು ಹೇಳುವ ಮೂಲಕ ಪೇಜಾವರ ಶ್ರೀಪಾದರು ತಮ್ಮ ಹೃದಯವೈಶಾಲ್ಯವನ್ನು ಮೆರೆದ ಘಟನೆಯನ್ನು ಸ್ವತಃ ರಾಘವೇಶ್ವರ ಶ್ರೀಗಳು ಹಂಚಿಕೊಂಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಬೆನ್ನು ನೋವಿನಿಂದ ಬಳಲುತ್ತಿರುವ ಪೇಜಾವರ ಶ್ರೀಗಳು, ವೈದ್ಯರ ಸೂಚನೆಯಂತೆ ವಿಶ್ರಾಂತಿಯನ್ನು ಪಡೆಯುತ್ತಿದ್ದು, ತೀವ್ರ ಬೆನ್ನುನೋವಿನ ಕಾರಣದಿಂದಾಗಿ ನಿತ್ಯಾನುಷ್ಠಾನಗಳನ್ನು  ಮಲಗಿಯೇ ಮಾಡುತ್ತಿದ್ದಾರೆ.

 

 

 

 

ಅನಾರೋಗ್ಯ ಇರುವುದರಿಂದ ಕುಳಿತು ಮಾತನಾಡಲಾಗುತ್ತಿಲ್ಲ, ಅಪಚಾರವಾಯಿತು ಎಂದು ಹೃದಯ ವೈಶಾಲ್ಯ ಮೆರೆದಿರುವುದು ಅವರ ಸಜ್ಜನಿಕೆ ಹಾಗೂ ದೊಡ್ಡ ಗುಣವನ್ನು ಜಗತ್ತಿಗೆ ಸಾರಿಹೇಳುವಂತಿದ್ದು, ಪೇಜಾವರ ಶ್ರೀಗಳು ಸಂತಶ್ರೇಷ್ಠರಲ್ಲಿ ಶ್ರೇಷ್ಠರು ಎಂಬುದು ನಿರೂಪಿತವಾದಂತಾಗಿದೆ.

ದ್ವೈತಾದ್ವೈತ ಸಿದ್ಧಾಂತ ಭಿನ್ನತೆಯ ಹೊರತಾಗಿಯೂ, ಪೇಜಾವರ ಅಧೋಕ್ಷಜ ಮಠ ಹಾಗೂ ಶ್ರೀರಾಮಚಂದ್ರಾಪುರಮಠಕ್ಕೆ ಬಹಳ ಹಿಂದಿನಿಂದಲೂ ಅನ್ಯೋನ್ಯ ಸಂಬಂಧವಿದೆ. ರಾಮಚಂದ್ರಾಪುರಮಠದ ರಾಘವೇಶ್ವರ ಶ್ರೀಗಳ ಸಂನ್ಯಾಸ ಸ್ವೀಕಾರ – ಯೋಗ ಪಟ್ಟಭಿಷೇಕ – ಪೀಠಾರೋಹಣ ಮುಂತಾದ ಎಲ್ಲಾ ಕಾರ್ಯಕ್ರಮಗಳಲ್ಲೂ ಪೇಜಾವರರು ಭಾಗಿಯಾಗಿದ್ದು, ರಾಘವೇಶ್ವರ ಶ್ರೀಗಳ ಮೇಲೆ ಮಿಥ್ಯಾರೋಪಗಳು ಬಂದಾಗ ಪೇಜಾವರ ಶ್ರೀಪಾದರು ಅವುಗಳನ್ನು ದಿಟ್ಟವಾಗಿ ಖಂಡಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ