ರೈಲು ದುರಂತ ಚಾಲಕನ ಸಮಯಪ್ರಜ್ಞೆಯಿಂದ ಪಾರು

ರಾಂಚಿ, ಫೆ.20-ಜಾರ್ಖಂಡ್‍ನಲ್ಲಿ ನಿನ್ನೆ ಭಾರೀ ರೈಲು ದುರಂತವೊಂದು ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದಂತಾಗಿದೆ. ಬೆಂಕಿ ಹೊತ್ತಿಕೊಂಡಿದ್ದ ಬೋಗಿಯನ್ನು ರೈಲಿನಿಂದ ತಕ್ಷಣ ಬೇರ್ಪಡಿಸುವ ಮೂಲಕ ಚಾಲಕ ಪ್ರಯಾಣಿಕರ ಜೀವ ಉಳಿಸಿದ್ದಾರೆ. ಕುಮಾರ್‍ಧುಬಿ ರೈಲು ನಿಲ್ದಾಣದ ಬಳಿ ಈ ದುರ್ಘಟನೆ ನಡೆದಿದೆ.

ಉದ್ಯಾನ್ ಅಭಾ ತೂಪಾನ್ ಎಕ್ಸ್‍ಪ್ರೆಸ್ ರೈಲು ಕುಮಾರ್‍ಧುಬಿ ರೈಲು ನಿಲ್ದಾಣದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಪ್ರಯಾಣಿಕರಿಗೆ ಸುಟ್ಟ ವಾಸನೆ ಅನುಭವವಾಯಿತು. ಇದೇ ಸಂದರ್ಭದಲ್ಲಿ ಚಾಲಕನಿಗೂ ವಾಸನೆ ಅಡರಿತು. ತಕ್ಷಣ ರೈಲು ನಿಲ್ಲಿಸಿ ಪರಿಶೀಲಿಸಿದಾಗ, ರೈಲಿನ ಕಟ್ಟಕಡೆಯ ಪಾರ್ಸಲ್ ಬೋಗಿಗೆ ಬೆಂಕಿ ಹೊತ್ತಿಕೊಂಡಿರುವುದು ಪತ್ತೆಯಾಯಿತು. ಕೂಡಲೆ ಸಮಯ ಪ್ರಜ್ಞೆ ಮೆರೆದ ಚಾಲಕ ಆ ಬೋಗಿಯನ್ನು ರೈಲಿನಿಂದ ಪ್ರತ್ಯೇಕಗೊಳಿಸಿದರು.

ರೈಲು ಚಲಿಸುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿದ್ದ ಪಾರ್ಸಲ್ ವ್ಯಾಗನ್ ಪಕ್ಕದಲ್ಲಿದ್ದ ಬೋಗಿಯಿಂದ ಕೆಲವು ಪ್ರಯಾಣಿಕರು ಕೆಳಗೆ ಜಿಗಿದರು. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಒಂದು ಗಂಟೆ ನಂತರ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಈ ಘಟನೆಯಿಂದ ಕೆಲಕಾಲ ಈ ಮಾರ್ಗದ ರೈಲುಗಳ ಸಂಚಾರಕ್ಕೆ ಅಡಚಣೆಯಾಗಿತ್ತು.

ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿಸಿ ಪ್ರಯಾಣಿಕರ ಪ್ರಾಣ ರಕ್ಷಿಸಿದ ರೈಲು ಚಾಲಕ ಮತ್ತು ಸಿಬ್ಬಂದಿಗೆ ನಗದು ಬಹುಮಾನ ನೀಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ