ಕಾಂಗ್ರೆಸ್ ಜಲಮಂಡಳಿ ಸದಸ್ಯ ಕಲ್ಕೆರೆ ನಾರಾಯಣಸ್ವಾಮಿ ಬಿಬಿಎಂಪಿ ಕಚೇರಿಗೆ ನುಗ್ಗಿ ಧಾಂದಲೆ

ಬೆಂಗಳೂರು, ಫೆ.20- ಶಾಸಕ ಹ್ಯಾರಿಸ್ ಪುತ್ರನ ದುಂಡಾವರ್ತನೆ ಬೆನ್ನಲ್ಲೆ ಸಿಎಂ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಮುಖಂಡ ಹಾಗೂ ಜಲಮಂಡಳಿ ಸದಸ್ಯ ಕಲ್ಕೆರೆ ನಾರಾಯಣಸ್ವಾಮಿ ಅವರು ಬಿಬಿಎಂಪಿ ಕಚೇರಿಗೆ ನುಗ್ಗಿ ಅಧಿಕಾರಿಗಳು ಮತ್ತು ಕಡತಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಜಮೀನು ಪರಭಾರೆ ವಿಚಾರವೊಂದರಲ್ಲಿ ಅಕ್ರಮ ಖಾತೆ ಮಾಡಿಕೊಡುವಂತೆ ಶಾಸಕ ಭೆರತಿ ಬಸವರಾಜ್ ಕಟ್ಟಾ ಬೆಂಬಲಿಗನಾಗಿರುವ ನಾರಾಯಣಸ್ವಾಮಿ ಕೆಆರ್ ಪುರಂ ವಲಯದ ಹೊರಮಾವು ಬಿಬಿಎಂಪಿ ಅಧಿಕಾರಿಗಳಿಗೆ ಧಮಕಿ ಹಾಕಿದ್ದ ಎನ್ನಲಾಗಿದೆ.

ಆದರೆ, ಕೆಆರ್ ಪುರಂ ವಲಯದಲ್ಲಿ ದಕ್ಷ ಅಧಿಕಾರಿ ಎನಿಸಿಕೊಂಡಿರುವ ಸಹಾಯಕ ಕಂದಾಯಾಧಿಕಾರಿ ಚಂಗಲ್‍ರಾಯಪ್ಪ ಅವರು ಯಾವುದೇ ಕಾರಣಕ್ಕೂ ಅಕ್ರಮವಾಗಿ ಖಾತೆ ಮಾಡಿಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದ್ದರು.

ಅಧಿಕಾರಿಯ ಈ ವರ್ತನೆಯಿಂದ ಬೇಸತ್ತ ನಾರಾಯಣಸ್ವಾಮಿ ಏಕಾಏಕಿ ಎಆರ್‍ಒ ಕಚೇರಿಗೆ ನುಗ್ಗಿ ಮೈಮೇಲೆ ದೆವ್ವ ಬಂದವರಂತೆ ವರ್ತಿಸಿದ್ದೇ ಅಲ್ಲದೆ ಎಆರ್‍ಒ ಚಂಗಲ್‍ರಾಯಪ್ಪ ಮತ್ತು ಕಚೇರಿಯಲ್ಲಿನ ಕಡತಗಳ ಮೇಲೆ ಪೆಟ್ರೋಲ್ ಸುರಿದು ನನ್ನ ಕೆಲಸ ಮಾಡಿಕೊಡದಿದ್ದರೆ ಇಡೀ ಕಚೇರಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಒಡ್ಡಿರುವ ವಿಡಿಯೋ ವೈರಲ್ ಆಗಿದೆ.

ಕೆಆರ್ ಪುರಂ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರೂ ಆಗಿದ್ದ ಕಲ್ಕೆರೆ ನಾರಾಯಣಸ್ವಾಮಿ ಅವರ ಈ ವರ್ತನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಕುಮ್ಮಕ್ಕು ನೀಡಿದವರ ವಿರುದ್ಧ ಕ್ರಮಕ್ಕೆ ಆಗ್ರಹ: ನಾರಾಯಣಸ್ವಾಮಿ ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸಿರುವ ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿಯವರು ಅಧಿಕಾರಿಗಳ ಮೇಲೆ ದರ್ಪ ತೋರಿದ ನಾರಾಯಣಸ್ವಾಮಿ ಹಿಂದಿರುವ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲಿನ ಶಾಸಕರ ಕುಮ್ಮಕ್ಕಿನಿಂದಲೇ ನಾರಾಯಣಸ್ವಾಮಿ ಆ ರೀತಿ ವರ್ತಿಸಿದ್ದಾರೆ. ಇಂತಹ ವರ್ತನೆ ಹಿಂದಿನ ಕಾಲದ ಪಾಳೆಗಾರಿಕೆ ಪದ್ಧತಿಯಲ್ಲಿ ಮಾತ್ರ ಇತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮತ್ತೆ ಪಾಳೆಗಾರಿಕೆ ಪದ್ಧತಿ ಜಾರಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಬಿಎಂಪಿಯಲ್ಲಿ ಆಡಳಿತ ನಡೆಸಲು ಸಂಖ್ಯಾಬಲವಿಲ್ಲದಿದ್ದರೂ ಮುಖ್ಯಮಂತ್ರಿಗಳು ಅನ್ಯ ಮಾರ್ಗದಲ್ಲಿ ಅಧಿಕಾರ ಏಕೆ ಹಿಡಿದರು ಎಂಬುದಕ್ಕೆ ಈ ಒಂದು ಪ್ರಕರಣ ಜೀವಂತ ಸಾಕ್ಷಿಯಾಗಿದೆ. ಇಂತಹ ವರ್ತನೆಯನ್ನು ನಾಡಿನ ಜನ ಎಂದಿಗೂ ಸಹಿಸುವುದಿಲ್ಲ. ಈ ಕೂಡಲೇ ದುರಹಂಕಾರದ ವರ್ತನೆ ತೋರಿರುವ ನಾರಾಯಣಸ್ವಾಮಿ ಅವರನ್ನು ಬಂಧಿಸಬೇಕು ಹಾಗೂ ಅವರಿಗೆ ಕುಮ್ಮಕ್ಕು ನೀಡುತ್ತಿರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮೂರು ದಿನಗಳ ಗಡುವು: ನಾರಾಯಣಸ್ವಾಮಿ ಅವರ ಗೂಂಡಾಗಿರಿ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಮೂರು ದಿನಗಳ ಒಳಗಾಗಿ ನಾರಾಯಣಸ್ವಾಮಿ ಅವರನ್ನು ಬಂಧಿಸಬೇಕು. ಇಲ್ಲದಿದ್ದರೆ ಕೆಆರ್ ಪುರಂನ ಪಾಲಿಕೆ ಕಚೇರಿಯನ್ನು ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಅಮೃತ್‍ರಾಜು ಅವರು ಗೂಂಡಾಗಿರಿ ತೋರಿಸಿರುವ ನಾರಾಯಣಸ್ವಾಮಿ ವಿರುದ್ಧ ಕೊಲೆ ಯತ್ನ ಮತ್ತು ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಿಕೊಂಡು ಮೂರು ದಿನಗಳೊಳಗಾಗಿ ಅವರನ್ನು ಬಂಧಿಸಬೇಕು. ಇಲ್ಲದಿದ್ದಲ್ಲಿ ಕೆಆರ್ ಪುರಂ ಕಚೇರಿಯನ್ನು ಬಂದ್ ಮಾಡಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಎತ್ತಂಗಡಿ: ಇಡೀ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವುದಾಗಿ ನಾರಾಯಣಸ್ವಾಮಿ ಬೆದರಿಕೆ ಒಡ್ಡಿದರೂ ಅಕ್ರಮ ಖಾತೆ ಮಾಡಿಕೊಡಲು ಸುತರಾಂ ಒಪ್ಪದ ಸಹಾಯಕ ಕಂದಾಯಾಧಿಕಾರಿ ಚಂಗಲ್‍ರಾಯಪ್ಪ ಅವರನ್ನು ನಾರಾಯಣಸ್ವಾಮಿ ತನ್ನ ಪ್ರಭಾವ ಬಳಸಿ ಕೆಆರ್ ಪುರಂ ಬಿಬಿಎಂಪಿ ಕಚೇರಿಯಿಂದ ಎತ್ತಂಗಡಿ ಮಾಡಿಸಿದ್ದಾನೆ.

ತಪ್ಪಿತಸ್ಥರ ವಿರುದ್ಧ ಕ್ರಮ: ಕೆಆರ್ ಪುರಂ ಬಿಬಿಎಂಪಿ ಕಚೇರಿಯಲ್ಲಿ ಪೆಟ್ರೋಲ್ ಸುರಿದ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿರುವ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ತಪ್ಪು ಯಾರೇ ಮಾಡಿದ್ದರೂ ಅದು ತಪ್ಪೇ. ಅಂಥಹವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಗೂಂಡಾ ವರ್ತನೆ ತೋರಿದವರ ವಿರುದ್ಧ ಪೆÇಲೀಸರೇ ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಭರವಸೆ ನೀಡಿದ್ದಾರೆ.

ಬಂಧಿಸಲು ಸೂಚನೆ: ಕಾಂಗ್ರೆಸ್ ಮುಖಂಡರು ಮತ್ತು ಶಾಸಕರ ಮಕ್ಕಳ ವರ್ತನೆಯಿಂದ ಬೇಸತ್ತು ಹೋಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಪ್ಪು ಮಾಡಿರುವವರನ್ನು ಯಾವುದೇ ಮುಲಾಜಿಲ್ಲದೆ ಬಂಧಿಸಿ ಎಂದು ಖಡಕ್ ಸೂಚನೆ ನೀಡಿದ್ದಾರೆ.

ಜಲಮಂಡಳಿ ಸದಸ್ಯ ನಾರಾಯಣಸ್ವಾಮಿ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ಅವರು ಪೆÇಲೀಸರಿಗೆ ತಪ್ಪು ಮಾಡಿರುವ ವ್ಯಕ್ತಿಯನ್ನು ಬಂಧಿಸಿ ಕ್ರಮ ಕೈಗೊಳ್ಳಿ. ಅದಕ್ಕೆ ನನ್ನ ಆಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ