ಮಹಾಮಸ್ತಾಕಭಿಷೇಕ ಜೈನ ಧರ್ಮದ ಸಂಪ್ರದಾಯದ ಪ್ರಕಾರ ಶ್ರದ್ಧಾ ಭಕ್ತಿಯಿಂದ ನೆರವೇರುತ್ತಿದೆ

ಶ್ರವಣಬೆಳಗೊಳ, ಫೆ.18-ವಿಶ್ವ ವಿಖ್ಯಾತ ಗೊಮ್ಮಟೇಶ್ವರ ಶ್ರೀ ಭಗವಾನ್ ಬಾಹುಬಲಿಯ ಮಹಾಮಸ್ತಾಕಭಿಷೇಕ ಜೈನ ಧರ್ಮದ ಸಂಪ್ರದಾಯದ ಪ್ರಕಾರ ಶ್ರದ್ಧಾ ಭಕ್ತಿಯಿಂದ ನೆರವೇರುತ್ತಿದೆ.

ಜೈನಕಾಶಿ ಶ್ರವಣಬೆಳಗೊಳದಲ್ಲಿ ಪಂಜಾಮೃತ ಅಭಿಷೇಕ ಸೇರಿದಂತೆ ಇಂದು ಬೆಳಗ್ಗೆಯಿಂದಲೇ 1008 ಕಳಸಗಳಿಂದ ತ್ಯಾಗ, ಅಹಿಂಸೆ, ವೈರಾಗ್ಯದ ಸಾಕಾರ ಮೂರ್ತಿಯಾಗಿರುವ ಗೊಮ್ಮಟೇಶ್ವರನಿಗೆ ಮಹಾಮಜ್ಜನ ನಡೆಯಿತು.

ಇಂದು ಗಣ್ಯ ಮತ್ತು ಅತಿಗಣ್ಯ ವ್ಯಕ್ತಿಗಳು ವಿಂಧ್ಯಗಿರಿಗೆ ಆಗಮಿಸದ ಹಿನ್ನೆಲೆಯಲ್ಲಿ ಮಧ್ಯಾಹ್ನದಿಂದ ರಾತ್ರಿಯವರಿಗೆ ಸಾರ್ವಜನಿಕರ ಅವಕಾಶ ಮಾಡಿಕೊಡಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಶ್ರವಣಬೆಳಗೊಳಕ್ಕೆ ಭೇಟಿ ನೀಡಿ ಮಹಾಭಿಷೇಕದ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಕೀರ್ತಿ ಸ್ವಾಮೀಜಿ ಸದ್ಗುರು ಜಗ್ಗಿ ವಾಸುದೇವ್ ಸೇರಿದಂತೆ ಜೈನಮುನಿಗಳು, ಸನ್ಯಾಸಿಗಳು, ಸಾವಿರಾರು ಭಕ್ತರ ಹಾಗೂ ಯಾತ್ರಾತಿಗಳ ಸಮ್ಮುಖದಲ್ಲಿ ಮಹಾಭಿಷೇಕ ನಡೆಸಲಾಯಿತು.

ಜಲಾಭಿಷೇಕ, ಎಳನೀರು, ಕಬ್ಬಿನ ರಸ, ಕ್ಷೀರ, ಶ್ವೇತ ಕಲ್ಕಚರ್ಣ, ಅರಿಶಿಣ, ಪ್ರಥಮ ಕೋನ ಕಳಸ, ದ್ವಿತೀಯ ಕೋನ ಕಳಸ, ತೃತೀಯ ಕೋನ ಕಳಸ, ಚತುರ್ಥ ಕೋನ ಕಳಸ, ಶ್ರೀಗಂಧ, ಚಂದನ, ಅಷ್ಟಗಂಧ, ಕೇಸರ ವೃಷ್ಟಿ, ರಜತ ವೃಷ್ಟಿ , ಸುವರ್ಣ ವೃಷ್ಟಿ, ಪೂರ್ಣಕುಂಭ, ಇಂದ್ರ, ಅಷ್ಟದ್ರವ್ಯ ಪೂಜೆ, ಮಹಮಂಗಳಾರತಿ ಮೂಲಕ ಬಾಹುಬಲಿಗೆ ಶ್ರದ್ಧಾಭಕ್ತಿಗಳಿಂದ ಅಭಿಷೇಕ ನಡೆಸಲಾಯಿತು.

ಅಭಿಷೇಕದ ಸಂದರ್ಭದಲ್ಲಿ ಭಕ್ತಾಧಿಗಳು ಭಾವಪರವಶರಾಗಿ ಜಯಘೋಷ ಕೂಗುತ್ತಾ ಕುಣಿದು ಕುಪ್ಪಳಿಸಿದರು. ಅಬಾಲವೃದ್ದಿಯಾಗಿ ಪಾಲ್ಗೊಂಡು ಈ ಶತಮಾನದ 2ನೇ ಹಾಗೂ 88ನೇ ಮಹಾಮಸ್ತಾಕಭಿಷೇಕವನ್ನು ಕಣ್ತುಂಬಿಸಿಕೊಂಡರು.

ಇಂದು ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಆಚರಣೆಗಳು ವಿಂಧ್ಯಗಿರಿ ಬೆಟ್ಟದಲ್ಲಿರುವ ಬಾಹುಬಲಿ ಮೂರ್ತಿ ಬಳಿ ನೆರವೇರಿದವು.ಭಕ್ತಾದಿಗಳು ಹಾಗೂ ಯಾತ್ರಾತಿಗಳು ತಂಡೋಪತಂಡವಾಗಿ ತೆರಳಿ ತ್ಯಾಗಮೂರ್ತಿಯ ದರ್ಶನ ಪಡೆದರು.

ಚಿಕ್ಕಬೆಟ್ಟಕ್ಕೂ ದಿಗಂಬರರು, ಶ್ವೇತಂಬರರು ಸೇರಿದಂತೆ ಜೈನಮುನಿಗಳು, ಭಕ್ತರು ಹಾಗೂ ಪ್ರವಾಸಿಗರು ತೆರಳಿ ಜೈನ ಬಸದಿಗಳ ವೀಕ್ಷಣೆ ಮಾಡಿದರು.

ಇಡೀ ಶ್ರವಣಬೆಳಗೊಳ ತುಂಬ ಜೈನ ಧರ್ಮದ ವಾತಾವರಣ ಕಂಡುಬಂದಿತು. ಎಲ್ಲಿ ನೋಡಿದರೂ ಜೈನಿಮುನಿಗಳು ಮತ್ತು ಭಕ್ತರೇ ಕಂಡುಬರುತ್ತಿದ್ದರು.

ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ, ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ಸಚಿವೆ ಉಮಾಶ್ರೀ, ಶಾಸಕರಾದ ಸಿ.ಎನ್.ಬಾಲಕೃಷ್ಣ , ಅಭಯ್‍ಚಂದ್ರ ಜೈನ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಹಲವು ಗಣ್ಯರು 1008 ಕಳಸಗಳ ಮಹಾಮಸ್ತಾಭಿಷೇಕದಲ್ಲಿ ಪಾಲ್ಗೊಂಡಿದ್ದರು. ಸಂಜೆವರೆಗೆ ಸಾರ್ವಜನಿಕ ದರ್ಶನಕ್ಕೆ ಮುಕ್ತ ಅವಕಾಶವಿರಲಿಲ್ಲ.

 

ಬಹುಬಲಿಯ ಕೆಲವು ಛಾಯಾಚಿತ್ರಗಳನ್ನು ಕೆಳಗೆ ಕಾಣಬಹುದು

 

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ