ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜ್ಯಾತ್ಯತೀತ ನಾಯಕರಾಗಿದ್ದಾರೆ – ಪಿ.ಜಿ.ಆರ್.ಸಿಂಧ್ಯಾ

ಬೆಂಗಳೂರು, ಫೆ.18-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜ್ಯಾತ್ಯತೀತ ನಾಯಕರಾಗಿದ್ದು, ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ತಿಳಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ನಡೆದ ಕರ್ನಾಟಕ ಆರ್ಯ ವೈಶ್ಯ ಮಹಾಮಂಡಳಿಯ ರಾಜ್ಯ ಮಟ್ಟದ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇವೇಗೌಡರು ಎಲ್ಲ ವರ್ಗಗಳ ನಾಯಕರಾಗಿದ್ದಾರೆ ಎಂದರು.

ಚುನಾವಣೆ ದೃಷ್ಟಿಯಿಂದ ಜಾತಿವಾರು ಲೆಕ್ಕಾಚಾರ ಹಾಕುವ ಈ ಕಾಲದಲ್ಲಿ ದೇವೇಗೌಡರು ಜಾತ್ಯತೀತ ನಾಯಕರೊಲ್ಲಬ್ಬರಾಗಿದ್ದಾರೆ.ಪ್ರಧಾನಿಯಾಗಿದ್ದ 20 ತಿಂಗಳ ಅವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಳಿವಯಸ್ಸಿನಲ್ಲೂ ದಣಿವರಿಯದೆ ದುಡಿಯುತ್ತಿರುವ ದೇವೇಗೌಡರು ವಿಧಾನಪರಿಷತ್‍ನ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಅನ್ಯ ಪಕ್ಷದವರಾಗಿದ್ದರೂ ಬೆಂಬಲವನ್ನು ನೀಡಿದ್ದಾರೆ. ಆರ್ಯ ವೈಶ್ಯ ಜನಾಂಗವನ್ನು ಅಲ್ಪಸಂಖ್ಯಾತ ಸಮುದಾಯವೆಂದು ಗುರುತಿಸಿ ಶಂಕರ ಮೂರ್ತಿ ಅವರನ್ನು ಸಭಾಪತಿಯಾಗಿ ಮುಂದುವರೆಸಲು ಸಹಕರಿಸಿದ್ದಾರೆ.

ಆರ್ಯ ವೈಶ್ಯರ ಸಮಾಜ ಸೇವೆ, ಶಿಕ್ಷಣಕ್ಕೆ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು ,ಅವರಿಗೆ ರಾಜಕೀಯ ಶಕ್ತಿಯನ್ನು ನೀಡಬೇಕಿದೆ. ಆ ಸಮಾಜದ ಅಭಿವೃದ್ದಿಗೆ ನಿಗಮ ಸ್ಥಾಪನೆ ಮಾಡಬೇಕಿದೆ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಆರ್ಯ ವೈಶ್ಯ ಸಮಾಜದ ಆಸ್ತಿಯಾಗಿದ್ದು, ತಾವು ದುಡಿದ ಹಣದಲ್ಲಿ ಸಮಾಜದ ಉದ್ದಾರಕ್ಕೆ ವ್ಯಯಿಸುತ್ತಿದ್ದಾರೆ ಎಂದು ಹೇಳಿದರು.

ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ಆರ್ಯ ವೈಶ್ಯ ಮಂಡಳಿ ನಗರದ ಅರಮನೆ ಮೈದಾನದಲ್ಲಿ ಇಂದು ಜಾಗೃತಿ ಸಮಾವೇಶವನ್ನು ನಡೆಸಿತು.

ಆರ್ಯ ವೈಶ್ಯ ಸಮುದಾಯದ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಸೌಲಭ್ಯಗಳಿಗಾಗಿ ಸಮುದಾಯ ಒಗ್ಗಟ್ಟಿನಿಂದ ಹೋರಾಡುವ ಉದ್ದೇಶದಿಂದ ಸಮಾವೇಶವನ್ನು ಆಯೋಜಿಸಲಾಗಿತ್ತು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಚಿವರಾದ ಪಿ.ಜಿ.ಆರ್.ಸಿಂಧ್ಯಾ, ಬಸವರಾಜ ಹೊರಟ್ಟಿ , ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಸೇರಿದಂತೆ ಮಂಡಳಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಆರ್ಯ ವೈಶ್ಯ ಸಮುದಾಯದ ವಿಕಲ ಚೇತನರ ಕಲ್ಯಾಣಕ್ಕಾಗಿ ಕರುಣಾಮಯಿ ಮಾಸಾಶನಕ್ಕೆ ಚಾಲನೆ, ಮಂಡಳಿಯ ರಾಜ್ಯಮಟ್ಟದ ಮಾಸಿಕ ಪತ್ರಿಕೆ ಬಿಡುಗಡೆ, ರಾಜ್ಯ ಮಹಿಳಾ ಘಟಕ ರಚನೆ, ಮಂಡಳಿ ವತಿಯಿಂದ ಬ್ಯಾಂಕ್ ಸ್ಥಾಪನೆ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಸಮಾವೇಶದಲ್ಲಿ ಚಾಲನೆ ನೀಡಲಾಯಿತು.
ಇಂದು ಬೆಳಗ್ಗೆ ಸಜ್ಜನ್‍ರಾವ್ ವೃತ್ತದ ವಾಸವಿ ದೇವಾಲಯದಿಂದ ಬೆಳ್ಳಿ ರಥದಲ್ಲಿ ವಾಸವಿದೇವಿ ಮೆರವಣಿಗೆಯನ್ನು ನಗರದಲ್ಲಿ ನಡೆಸಲಾಯಿತು.

ಇದಲ್ಲದೆ ವಿಶ್ವ ವಿಖ್ಯಾತ ಹಂಪಿಯಿಂದ ಪಾದಯಾತ್ರೆ ಮೂಲಕ ಹೊರಟಿದ್ದ ಸಾವಿರಾರು ಯುವಕರು ಕೂಡ ಸಮಾವೇಶದಲ್ಲಿ ಭಾಗವಹಿಸಿದ್ದರು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ