ಇಂಧನ ಬಳಸುವ ಆಟೋಗಳನ್ನು ಹಂತ ಹಂತವಾಗಿ ವಿದ್ಯುತ್ ಆಟೋಗಳನ್ನಾಗಿ ಪರಿವರ್ತಿಸುವುದು – ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು, ಫೆ.17-ಸಾಂಪ್ರದಾಯಿಕ ಇಂಧನ ಬಳಸುವ ಆಟೋಗಳನ್ನು ಹಂತ ಹಂತವಾಗಿ ವಿದ್ಯುತ್ ಆಟೋಗಳನ್ನಾಗಿ ಪರಿವರ್ತಿಸಿದರೆ ಪರಿಸರ ಮಾಲಿನ್ಯ ನಿಯಂತ್ರಿಸಬಹುದು ಎಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ನಗರದ ಖಾಸಗಿ ಹೊಟೇಲ್‍ನಲ್ಲಿ ಸಿ-ಮ್ಯಾಕ್ ಸಂಸ್ಥೆ ಏರ್ಪಡಿಸಿದ್ದ ಉತ್ತಮ ಪದ್ಧತಿಗಳ ದಾಖಲೀಕರಣ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಟೋ ಮತ್ತು ದ್ವಿಚಕ್ರ ವಾಹನ ಸೇರಿದಂತೆ 50 ಎಲೆಕ್ಟ್ರಿಕ್ ವಾಹನಗಳಿಗೆ ಚಾಲನೆ ನೀಡಿದ್ದಾರೆ. ಸಾಂಪ್ರದಾಯಿಕ ಇಂಧನ ಬಳಕೆಯಿಂದ ನಗರ ಪ್ರದೇಶದಲ್ಲಿ ಮಾಲಿನ್ಯ ಹೆಚ್ಚಾಗುತ್ತಿದೆ. ಆರ್ಥಿಕವಾಗಿಯೂ ದುಬಾರಿಯಾಗಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆ ಮಿತವ್ಯಯದ್ದಾಗಿದ್ದು, ನಿರ್ವಹಣೆ ಸುಲಭವಾಗಿದೆ. ಹೀಗಾಗಿ ಹಂತ ಹಂತವಾಗಿ ಎಲೆಕ್ಟ್ರಿಕ್ ಆಟೋಗಳನ್ನು ಹೆಚ್ಚು ಬಳಸಲು ಪೆÇ್ರೀ ಚಿಂತನೆ ನಡೆದಿದೆ ಎಂದು ಹೇಳಿದರು.

ರಾಜ್ಯ ಅಥವಾ ದೇಶದ ಯಾವುದೇ ಸ್ಥಳೀಯ ಸಂಸ್ಥೆಗಳು ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದರೆ ಅದನ್ನು ಅನುಸರಿಸಲು ಇತರೆ ಸ್ಥಳೀಯ ಸಂಸ್ಥೆಗಳು ಹಿಂಜರಿಯಬಾರದು. ನಾಗರಿಕ ಸ್ನೇಹಿ ಸುಧಾರಣೆಗೆ ಪರಸ್ಪರ ಆರೋಗ್ಯಕರ ಪೈಪೆÇೀಟಿ ಇರಬೇಕು ಎಂದು ಸಲಹೆ ನೀಡಿದರು.

ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಯಾವುದೇ ಯೋಜನೆಗಳು ಕಾಲಮಿತಿಯಲ್ಲಿ ಮುಗಿಯಬೇಕು. ವಿಳಂಬವಾದಷ್ಟು ಯೋಜನಾ ವೆಚ್ಚ ದುಬಾರಿಯಾಗುತ್ತದೆ. ಜನರಿಗೆ ಹೊರೆಯಾಗುತ್ತದೆ. 2011ರಲ್ಲಿ ಆರಂಭವಾದ ಒಳಚರಂಡಿ ವ್ಯವಸ್ಥೆ ಇನ್ನೂ ಮುಗಿದಿಲ್ಲ. ಇದರಿಂದ ಜನರಿಗೂ ಕಿರಿಕಿರಿಯಾಗುತ್ತಿದೆ. ಯೋಜನಾ ವೆಚ್ಚವೂ ಹೆಚ್ಚಾಗಿ ಸರ್ಕಾರಕ್ಕೆ ಹೊರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜನರಿಗೆ ಸೂಕ್ತ ಸೌಲಭ್ಯ ಒದಗಿಸಿದರೆ ಸಂಪನ್ಮೂಲ ಕ್ರೂಢೀಕರಣಕ್ಕೆ ಸಮಸ್ಯೆಯಾಗುವುದಿಲ್ಲ. ಸೌಲಭ್ಯಗಳನ್ನೇ ನೀಡದೆ ಇದ್ದರೆ ಜನರಿಂದ ನಿಂದನೆ ಕೇಳಬೇಕಾಗುತ್ತದೆ. ಹಾಗಾಗಿ ಅಧಿಕಾರಿಗಳು ಜನರ ಮನೆ ಬಾಗಿಲಿಗೆ ಸೇವೆ ತಲುಪಿಸಲು ಹೆಚ್ಚು ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

ಬಿಬಿಎಂಪಿ ಆಯುಕ್ತರಾದ ಮಂಜುನಾಥ್‍ಪ್ರಸಾದ್, ಹಿರಿಯ ಅಧಿಕಾರಿಗಳಾದ ಮಹೇಂದ್ರ ಜೈನ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ