ಎಟಿಎಂಗಳಿಗೆ ಹಗಲು ವೇಳೆ ಹಣ ತುಂಬಿಸಿ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ

ಬೆಂಗಳೂರು, ಫೆ.15- ಬ್ಯಾಂಕ್‍ಗಳ ಎಟಿಎಂಗಳಿಗೆ ಹಗಲು ವೇಳೆ ಹಣ ತುಂಬಿಸಿ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ ಇಬ್ಬರು ನೌಕರರು ಸೇರಿದಂತೆ ಮೂವರನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿ ಆಟೋದಲ್ಲಿ ಸಾಗಿಸುತ್ತಿದ್ದ 5.29 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ರಾಮಮೂರ್ತಿನಗರದ ಸತೀಶ್ (32), ಮಂಜುನಾಥ್ (21) ಮತ್ತು ಸುನಿಲ್‍ಕುಮಾರ್ (24) ಬಂಧಿತ ಆರೋಪಿಗಳು.

ಈ ಮೂವರು ಫೆ.10ರಂದು ಮಧ್ಯರಾತ್ರಿ 3 ಗಂಟೆ ಸಂದರ್ಭದಲ್ಲಿ ಹೆಣ್ಣೂರು ಕ್ರಾಸ್‍ನಿಂದ ಗುಬ್ಬಿ ಕ್ರಾಸ್ ಕಡೆಗೆ ಆಟೋದಲ್ಲಿ ಹೋಗುತ್ತಿದ್ದರು.
ಆರೋಪಿ ಸುನಿಲ್‍ಕುಮಾರ್ ಆಟೋ ಚಾಲನೆ ಮಾಡುತ್ತಿದ್ದನು. ಭೆರತಿ ಕ್ರಾಸ್‍ನಲ್ಲಿದ್ದ ಕೊತ್ತನೂರು ಪೆÇಲೀಸ್ ಠಾಣೆಯ ಕಾನ್ಸ್‍ಟೆಬಲ್ ಶೇಖರಪ್ಪ ನಾಯಕ್ ಹಾಗೂ ಮೈಲಾರ್‍ಲಿಂಗಪ್ಪ ಅವರು ಅನುಮಾನಗೊಂಡು ಆಟೋರಿಕ್ಷಾವನ್ನು ಬೆನ್ನಟ್ಟಿ ಗುಬ್ಬಿ ಕ್ರಾಸ್‍ನಲ್ಲಿ ಅಡ್ಡ ಹಾಕಿ ಪರಿಶೀಲಿಸಿದ್ದಾರೆ.
ಈ ಸಂದರ್ಭದಲ್ಲಿ ಆಟೋದಲ್ಲಿದ್ದ ಸತೀಶ್ ಮತ್ತು ಸುನಿಲ್‍ಕುಮಾರ್ ಮದ್ಯಪಾನ ಮಾಡಿದ್ದು, ಆಟೋವನ್ನು ಪರಿಶೀಲಿಸಿದಾಗ ಹಿಂಭಾಗದ ಸೀಟಿನ ಹಿಂದೆ 2000ರೂ. ಹಾಗೂ 500ರೂ. ಮುಖಬೆಲೆಯ ನೋಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ಕಂಡು ಆಟೋರಿಕ್ಷಾ ಸಮೇತ ಆರೋಪಿಗಳನ್ನು ಠಾಣೆಗೆ ಕರೆದೊಯ್ದು ಇನ್ಸ್‍ಪೆಕ್ಟರ್ ಅವರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಠಾಣೆಗೆ ಬಂದ ಇನ್ಸ್‍ಪೆಕ್ಟರ್ ಹರಿಯಪ್ಪ ಆರೋಪಿಗಳನ್ನು ವಿಚಾರಣೆಗೊಳಪಡಿಸಿ ಆಟೋದಲ್ಲಿದ್ದ 2000, 500 ಹಾಗೂ 100ರೂ. ಮುಖಬೆಲೆಯ ಒಟ್ಟು 5.29 ಲಕ್ಷ ರೂ. ನೋಟುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳಾದ ಸತೀಶ್ ಮತ್ತು ಮಂಜುನಾಥ್ ಈಜಿಪುರದಲ್ಲಿರುವ ರೇಡಿಯಂಟ್ ಕ್ಯಾಷ್ ಮ್ಯಾನೇಜ್‍ಮೆಂಟ್ ಸರ್ವೀಸ್ ಕಂಪೆನಿಯಲ್ಲಿ ಕಸ್ಟೋಡಿಯನ್ ಆಗಿ ಎಟಿಎಂಗಳಿಗೆ ಹಣ ತುಂಬುವ ಕೆಲಸ ಮಾಡುತ್ತಿದ್ದರು.

ಇವರ ಕಂಪೆನಿಯು ನಗರದ ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಸಿಟಿ ಬ್ಯಾಂಕ್, ಎಚ್‍ಡಿಎಫ್‍ಸಿ, ಕಾಪೆರ್Çರೇಷನ್ ಹಾಗೂ ಡಾಯಿಚ್ ಬ್ಯಾಂಕ್‍ಗಳ ಎಟಿಎಂಗಳಿಗೆ ಹಣ ತುಂಬುವ ಕೆಲಸ ಮಾಡುತ್ತಿದೆ.

ಈ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಇವರಿಬ್ಬರಿಗೆ ಕೆಆರ್ ಪುರ, ರಾಮಮೂರ್ತಿನಗರ, ಹೆಣ್ಣೂರು, ಕೊತ್ತನೂರು, ಹೆಬ್ಬಾಳ ಕಡೆಗಳ ತಲಾ 20 ಎಟಿಎಂಗಳಿಗೆ ಹಣ ತುಂಬುವ ಕೆಲಸ ವಹಿಸಿತ್ತು.

ಇವರಿಗೆ ನೀಡಲಾಗಿದ್ದ ಎಟಿಎಂ ವೆÅಷಿನ್‍ಗೆ ಬಳಸುವ ಮೂರು ಮಾಸ್ಟರ್ ಕೀಗಳನ್ನು, ಎಟಿಎಂ ಅಡ್ಮಿನ್ ಕಾರ್ಡ್‍ಗಳನ್ನು ಹಾಗೂ ಸೀಕ್ರೆಟ್ ಕೋಡ್ ನಂಬರ್‍ಗಳನ್ನು ದುರುಪಯೋಗಪಡಿಸಿಕೊಂಡು ಹಗಲು ವೇಳೆ ಎಟಿಎಂಗಳಿಗೆ ಹಣ ತುಂಬಿಸಿ ನಂತರ ಮಧ್ಯರಾತ್ರಿ ಸಮಯದಲ್ಲಿ ಮತ್ತೊಬ್ಬ ಆರೋಪಿಯಾದ ಸುನಿಲ್‍ಕುಮಾರ್‍ನ ಆಟೋರಿಕ್ಷಾದಲ್ಲಿ ಹೋಗಿ ಎಟಿಎಂಗಳಿಂದ ಹಣ ಕಳವು ಮಾಡುತ್ತಿದ್ದರು.

ಈ ಕಂಪೆನಿಯಿಂದ ಹಾಗೂ ಬ್ಯಾಂಕ್‍ಗಳಿಂದ ಆರೋಪಿಗಳಿಗೆ ವಹಿಸಲಾಗಿದ್ದ 20 ಎಟಿಎಂಗಳಿಗೆ ಆಡಿಟಿಂಗ್ ಬಂದಾಗ ಈತನು ಮಾಡಿರುವ ಕಳ್ಳತನದಿಂದ ಕೊರತೆ ಇರುವ ಹಣವನ್ನು ಆರೋಪಿ ಮಂಜುನಾಥ ಎಟಿಎಂಗೆ ಹಾಕಿ ಬ್ಯಾಲೆನ್ಸ್ ಮಾಡುತ್ತಿದ್ದನು.

ಅದೇ ರೀತಿ ಮಂಜುನಾಥ್‍ಗೆ ವಹಿಸಿರುವ ಎಟಿಎಂಗಳಿಗೆ ಆಡಿಟಿಂಗ್ ಬಂದಾಗ ಆರೋಪಿ ಸತೀಶ ಹಣ ಹಾಕಿ ಬ್ಯಾಲೆನ್ಸ್ ಮಾಡುತ್ತಿದ್ದನು.
ಇದೇ ರೀತಿ ಸತೀಶ್ ಕೆಆರ್ ಪುರದ ಟಿಸಿ ಪಾಳ್ಯ ಕೆನರಾ ಬ್ಯಾಂಕ್‍ನ ಎಟಿಎಂ ಹಾಗೂ ಹೆಣ್ಣೂರು ಕ್ರಾಸ್‍ನ ಕೆನರಾಬ್ಯಾಂಕ್ ಎಟಿಎಂಗಳಲ್ಲಿ 10.32 ಲಕ್ಷ ರೂ.ಗಳನ್ನು, ಹಾಗೂ ಆರೋಪಿ ಮಂಜುನಾಥ ರಾಮಮೂರ್ತಿನಗರದ ಯೂನಿಯನ್ ಬ್ಯಾಂಕ್ ಎಟಿಎಂನಲ್ಲಿ 52 ಸಾವಿರ ರೂ. ಸೇರಿ ಒಟ್ಟು 10.84 ಲಕ್ಷ ರೂ.ಗಳನ್ನು ಕಳ್ಳತನ ಮಾಡಿ ಮೋಜಿನ ಜೀವನ ನಡೆಸುತ್ತಿದ್ದರು.

ಆರೋಪಿಗಳಾದ ಸತೀಶ್ ಮತ್ತು ಸುನಿಲ್‍ಕುಮಾರ್ ಹೆಣ್ಣೂರು ಕ್ರಾಸ್ ಕೆನರಾ ಬ್ಯಾಂಕ್ ಎಟಿಎಂನಿಂದ ಹಣ ಕಳವು ಮಾಡಿಕೊಂಡು ನಂತರ ಗುಬ್ಬಿ ಕ್ರಾಸ್‍ನಲ್ಲಿರುವ ಕೆನರಾಬ್ಯಾಂಕ್ ಎಟಿಎಂನಲ್ಲಿ ಹಣ ಕಳವು ಮಾಡಲು ಹೋಗುತ್ತಿದ್ದಾಗ ಪೆÇಲೀಸರ ಕೈಗೆ ಹಣದ ಸಮೇತ ಸಿಕ್ಕಿಬಿದ್ದಿದ್ದಾರೆ.
ಆರೋಪಿಗಳಿಂದ 5.81 ಲಕ್ಷ ರೂ. ನಗದು, ಎಟಿಎಂನ 3 ಮಾಸ್ಟರ್ ಕೀಗಳು, ಎಸ್‍ಬಿಐ ಬ್ಯಾಂಕ್‍ನ 3 ಎಟಿಎಂ ಕಾರ್ಡ್ ಹಾಗೂ ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, ಇಂಡಿಯನ್ ಓವರ್‍ಸೀಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೋಟಕ್ ಮಹೀಂದ್ರ ಬ್ಯಾಂಕ್‍ಗಳ ಒಂದೊಂದು ಎಟಿಎಂ ಕಾರ್ಡ್, 3 ಮೊಬೈಲ್ ಹಾಗೂ ಆಟೋ ರಿಕ್ಷಾಗಳನ್ನು ವಶಪಡಿಸಿಕೊಂಡಿದ್ದಾರೆ.

ಪೂರ್ವ ವಲಯದ ಹೆಚ್ಚುವರಿ ಪೆÇಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್, ಉಪ ಪೆÇಲೀಸ್ ಆಯುಕ್ತ ಗಿರೀಶ್ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಹರಿಯಪ್ಪ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ.

(ಫೋಟೋ ನಿರೂಪಣೆಗಾಗಿ ಮಾತ್ರ ಸೇರಿಸಲಾಗಿದೆ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ