ಸುಂಜುವಾನ್ ಹಾಗೂ ಕರಣ್ ನಗರ ಸೇನಾ ಶಿಬಿರಗಳ ದಾಳಿ ಪ್ರಕರಣ: ಜೈಶ್ ಇ ಮೊಹಮದ್ ಮತ್ತು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗಳ ಜಂಟಿ ಸಂಚು

ನವದೆಹಲಿ:ಫೆ-15: ಜಮ್ಮು-ಕಾಶ್ಮೀರದ ಸುಂಜುವಾನ್ ಸೇನಾ ಶಿಬಿರದ ಮೇಲಿನ ದಾಳಿ ಹಾಗೂ ಕರಣ್ ನಗರದಲ್ಲಿನ ದಾಳಿಗಳು ಪಾಕಿಸ್ತಾನ ಮೂಲದ ಜೈಶ್ ಇ ಮೊಹಮದ್ ಮತ್ತು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗಳು ಜಂಟಿ ಸಂಚು ರೂಪಿಸಿದ್ದವು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಉಗ್ರರ ದಾಳಿ ಕುರಿತು ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಸುಂಜುವಾನ್ ಸೇನಾ ಶಿಬಿರ ಮತ್ತು ಶ್ರೀನಗರದ ಕರಣ್ ನಗರದಲ್ಲಿ ನಡೆದ ಉಗ್ರ ದಾಳಿಗಳಿಗೆ ಪಾಕಿಸ್ತಾನ ಮೂಲದ ಜೈಶ್ ಇ ಮೊಹಮದ್ ಮತ್ತು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗಳು ಜಂಟಿ ಸಂಚು ರೂಪಿಸಿದ್ದವು ಎಂದು ಹೇಳದ್ದಾರೆ.

ಆಧಿಕಾರಿಗಳು ತಿಳಿಸಿರುವಂತೆ ಎರಡು ಪ್ರತ್ಯೇಕ ಉಗ್ರ ಸಂಘಟನೆಗಳು ಸೇರಿ ದಾಳಿ ನಡೆಸಿರುವುದು ತೀರಾ ಅಪರೂಪದ ಪ್ರಕರಣವಾಗಿದ್ದು, ಗರಿಷ್ಟ ಸಾವು-ನೋವು ಈ ಸಂಚಿನ ಹಿಂದಿನ ಗುರಿಯಾಗಿತ್ತು ಎಂದು ಹೇಳಿದ್ದಾರೆ.

ಜಮ್ಮುವಿನ ಬಳಿ ಇರುವ ಸುಂಜುವಾನ್ ಸೇನಾ ಶಿಬಿರದ ಮೇಲೆ ಆತ್ಮಹತ್ಯಾ ದಾಳಿ ನಡೆಸುವ ಹೊಣೆಯನ್ನು ಜೈಶ್ ಇ ಮೊಹಮದ್ ಹೊತ್ತಿದ್ದು, ಶ್ರೀನಗರದ ಕರಣ್ ನಗರದ ಸಮೀಪ ಇರುವ ಸಿಆರ್ ಪಿಎಫ್ ಶಿಬಿರದ ಮೇಲಿನ ದಾಳಿ ಹೊಣೆಯನ್ನು ಲಷ್ಕರ್ ಸಂಘಟನೆ ಹೊತ್ತುಕೊಂಡಿತ್ತು. ಇನ್ನು ಈ ದಾಳಿಗಳಿಗೆ ಪುಲ್ವಾಮ ಮತ್ತು ತ್ರಾಲ್ ನಲ್ಲಿರುವ ಉಗ್ರ ಸಂಘಟನೆಗಳ ಕಮಾಂಡರ್ ಗಳು ಸಂಚು ರೂಪಿಸಿರುವ ಸಾಧ್ಯತೆ ಇದ್ದು, ಇದರ ಬೆನ್ನಲ್ಲೇ ಶ್ರೀನಗರ ಸೇನಾ ಕ್ಯಾಂಪ್ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಂಜುವಾನ್ ದಾಳಿ ಮಾಡಿದ ಮೂವರು ಮತ್ತು ಕರಣ್ ನಗರದ ಮೇಲೆ ದಾಳಿ ಮಾಡಿದ್ದ ಇಬ್ಬರು ಉಗ್ರರನ್ನು ಹತ್ಯೆಗೈಯ್ಯಲಾಗಿದ್ದು, ಈ ಎಲ್ಲ ಐದೂ ಉಗ್ರರು ಪಾಕಿಸ್ತಾನ ಮೂಲದ ಉಗ್ರರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಂಜುವಾನ್ ದಾಳಿಯಲ್ಲಿ ಸೈನಿಕರು ಸೇರಿದಂತೆ ಒಟ್ಟು 7 ಮಂದಿ ಬಲಿಯಾಗಿದ್ದರು.

(ಫೋಟೋ ನಿರೂಪಣೆಗಾಗಿ ಮಾತ್ರ ಸೇರಿಸಲಾಗಿದೆ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ