ಚುನಾವಣೆ ಸಮೀಪಿಸುತ್ತಿದ್ದಂತೆ ಮೊಳಕಾಲ್ಮ್ಮೂರು ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿ ಕಾಂಗ್ರೆಸ್ ಟಿಕೆಟ್‍ಗಾಗಿ ಭಾರೀ ಪೈಪೋಟಿ

ಚಳ್ಳಕೆರೆ, ಫೆ.15- ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ರೇಷ್ಮೆ ಸೀರೆಗೆ ಪ್ರಸಿದ್ಧಿ ಪಡೆದಿರುವ ಮೊಳಕಾಲ್ಮ್ಮೂರು ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿ ಕಾಂಗ್ರೆಸ್ ಟಿಕೆಟ್‍ಗಾಗಿ ಭಾರೀ ಪೈಪೋಟಿ ಶುರುವಾಗಿದೆ.

ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ದಿಢೀರ್ ಚಳ್ಳಕೆರೆಯ ಶಾಸಕರ ಭವನಕ್ಕೆ ಭೇಟಿ ನೀಡಿ, ಶಾಸಕ ಟಿ.ರಘುಮೂರ್ತಿಯೊದಿಗೆ ರಹಸ್ಯ ಮಾತುಕತೆ ನಡೆಸಿರುವುದು ಕಾಂಗ್ರೆಸ್ ಮುಖಂಡರಲ್ಲಿ ಅಚ್ಚರಿ ಮೂಡಿಸಿದೆ.

ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ನಾನು ಕೂಡ ಪ್ರಬಲ ಆಕಾಂಕ್ಷಿಯಾಗಿದ್ದು, ವರಿಷ್ಠರು ನನಗೆ ಟಿಕೆಟ್ ನೀಡುವ ಭರವಸೆ ಇರುವುದರಿಂದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಈಗಾಗಲೇ ಕಳೆದ ಮೂರು ತಿಂಗಳಿಂದಲೂ ಈ ಕ್ಷೇತ್ರಕ್ಕೆ ಹಲವಾರು ಆಕಾಂಕ್ಷಿಗಳು ಹೆಸರು ಕೇಳಿಬರುತ್ತಿವೆ. ಅಲ್ಲದೆ, ಈ ಕ್ಷೇತ್ರದಲ್ಲಿ ಸತತವಾಗಿ ನಾಲ್ಕು ಬಾರಿ ಜಯಭೇರಿ ಬಾರಿಸಿದ್ದ ಬಳ್ಳಾರಿ ಕ್ಷೇತ್ರದ ಶಾಸಕ ಎನ್.ವೈ ಗೋಪಾಲಕೃಷ್ಣ ಈ ಬಾರಿ ನನಗೇ ಟಿಕೆಟ್ ಸಿಗಲಿದೆ ಎಂದು ಈಗಾಗಲೇ ಹಲವಾರು ಗ್ರಾಮಗಳಿಗೆ ಭೇಟಿ ನೀಡುವ ಮೂಲಕ, ಕ್ಷೇತ್ರದಲ್ಲಿ ಮತ ಬೇಟೆ ಆರಂಭಿಸಿದ್ದಾರೆ.

ಇನ್ನು ನಟ ಶಶಿಕುಮಾರ್ ಸಹ ಕ್ಷೇತ್ರಕ್ಕೆ ಭೇಟಿ ನೀಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ಜಿಲ್ಲೆಯ ಯಾವುದಾದರೂ ಒಂದು ಪರಿಶಿಷ್ಟ ಪಂಗಡದ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿ ಈಗಾಗಲೇ ಕ್ಷೇತ್ರವನ್ನು ಸುತ್ತುವ ಕೆಲಸ ಆರಂಭಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಚಳ್ಳಕೆರೆಯ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂದರ್ಭದಲ್ಲಿ ಟಿಕೆಟ್‍ಗಾಗಿ ಪೈಪೆÇೀಟಿ ನಡೆಸಿದ್ದರಿದ ವಿ.ಎಸ್.ಉಗ್ರಪ್ಪ ಹಾಗೂ ಶಾಸಕ ಟಿ.ರಘುಮೂರ್ತಿ ಅವರ ವಿಶ್ವಾಸ ಅಷ್ಟಕ್ಕಷ್ಟೇ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು.
ಆದರೆ, ಈಗ ಇಬ್ಬರು ರಹಸ್ಯ ಮಾತುಕತೆ ನಡೆಸಿರುವುದು ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಕುತೂಹಲ ಉಂಟು ಮಾಡಿದೆ. ಆದರೆ, ರಾಜಕೀಯದಲ್ಲಿ ಯಾರು ಮಿತ್ರರು, ಯಾರು ಶತ್ರುಗಳು ಯಾರು ಎಂಬುದಕ್ಕೆ ಈಗಿನ ಬೆಳವಣಿಗೆಗಳು ಸಾಕ್ಷಿಯಾಗಿವೆ.

ಒಟ್ಟಾರೆ ಈ ಕ್ಷೇತ್ರದಿಂದ ಎಸ್.ನಿಜಲಿಂಗಪ್ಪನವರು ಸ್ಪರ್ಧಿಸಿ ಮುಖ್ಯಮಂತ್ರಿಯಾಗಿದ್ದ ಈ ಕ್ಷೇತ್ರಕ್ಕೆ ಈ ಬಾರಿ ಟಿಕೆಟ್‍ಗಾಗಿ ಭಾರೀ ಪೈಪೋಟಿ ಶುರುವಾಗಿದೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ