ಪಿಎನ್ ಬಿ ವಂಚನೆ ಪ್ರಕರಣ: ಉದ್ಯಮಿ ನೀರವ್ ಆಸ್ತಿಗಳ ಮೇಲೆ ಇ.ಡಿ. ದಾಳಿ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ಖ್ಯಾತ ಉದ್ಯಮಿ ಮತ್ತು ಆಭರಣ ವ್ಯಾಪಾರಿ ನೀರವ್ ಮೋದಿಗೆ ಸಂಬಂಧಿಸಿದ ಆಸ್ತಿ-ಪಾಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನೀರವ್ ಮೋದಿ ಅವರಿಗೆ ಸಂಬಂಧಿಸಿದ ಸೂರತ್ ನ ಮೂರು, ಮುಂಬೈನ  ನಾಲ್ಕು ಮತ್ತು ದೆಹಲಿಯ 2 ಕಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪಂಜಾಬ್  ನ್ಯಾಷನಲ್ ಬ್ಯಾಂಕ್ ನಲ್ಲಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನೀರವ್ ಮೋದಿ ವಿರುದ್ಧ ಸುಮಾರು 11, 300 ಕೋಟಿ ಅಕ್ರಮ ಹಣ ವ್ಯವಹಾರ ಮಾಡಿರುವ ಪ್ರಕರಣ ದಾಖಲಾಗಿದ್ದು, ಪ್ರಸ್ತುತ ಉದ್ಯಮಿ ನೀರವ್  ಮೋದಿ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ನಿನ್ನೆಯಷ್ಟೇ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅವ್ಯವಹಾರ ಕುರಿತು ಮಾಹಿತಿ ಬಹಿರಂಗ ಪಡಿಸಿತ್ತು. ಇದರ ಬೆನ್ನಲ್ಲೇ ಇ.ಡಿ. ಮುಂಬೈನ ಕಾಲಾಘೋಡದಲ್ಲಿರುವ ಷೋರೂಂ ಮತ್ತು ಕಚೇರಿ ಸೇರಿದಂತೆ 4  ಪ್ರದೇಶಗಳಲ್ಲಿ ದಾಳಿ ನಡೆಸಿದ್ದು, ಇದಲ್ಲದೆ ಸೂರತ್ ನ ಮೂರು ಮತ್ತು ದೆಹಲಿಯ 2 ಕಡೆಗಳಲ್ಲಿ ದಾಳಿ ನಡೆಸಿದೆ. ದಾಳಿ ವೇಳೆ ಅಧಿಕಾರಿಗಳು ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಶೋಧ ಕಾರ್ಯ  ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ಅಕ್ರಮ ಹಣ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪಿಎನ್ ಬಿ ತನ್ನ 10 ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ತನಿಖೆಯನ್ನು ಸಿಬಿಐಗೆ ಶಿಫಾರಸು ಮಾಡಿದೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ