ವೆಲೆಂಟೈನ್ಸ್ ಡೇ ದಿನ ಲಖನೌ ವಿವಿಗೆ ರಜೆ ಘೋಷಣೆ

ಲಖನೌ:ಫೆ-13: ಪ್ರೇಮಿಗಳ ದಿನದಂದು ಲಖನೌ ವಿಶ್ವವಿದ್ಯಾಲಯ ಕಾಲೇಜಿಗೆ ರಜೆ ನೀಡಿ ಪ್ರಕಟಣೆ ಹೊರಡಿಸಿದೆ.

ಪ್ರೇಮಿಗಳ ದಿನದಂದು ಕಾಲೇಜಿಗೆ ಬರಬೇಡಿ, ಒಂದು ವೇಳೆ ಬಂದು ಅನುಚಿತವಾಗಿ ವರ್ತಿಸಿದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ವಿಶ್ವವಿದ್ಯಾಲಯ ಪ್ರಕಟಣೆ ಹೊರಡಿಸಿದೆ.

ಪಾಶ್ಚಾತ್ಯ ಸಂಸ್ಕೃತಿಯಿಂದ ಪ್ರಭಾವಿತರಾಗಿ ಕೆಲವು ವರ್ಷಗಳಿಂದ ಫೆ.14ರಂದು ಯುವಜನರು ಪ್ರೇಮಿಗಳ ದಿನ ಆಚರಿಸುತ್ತಿದ್ದಾರೆ. ಹಾಗಾಗಿ, ಕೋ–ಎಜುಕೇಷನ್‌(ಯುವಕ–ಯುವತಿಯರು ಕಲಿಯುವ) ಇರುವ ಕಾಲೇಜುಗಳಲ್ಲಿ ಶಿವರಾತ್ರಿಯ ಪ್ರಯುಕ್ತ ರಜೆ ಘೋಷಿಸಿದ್ದೇವೆ ಎಂದು ವಿಶ್ವವಿದ್ಯಾಲಯದ ಅಧಿಕಾರಿ ವಿನೋದ್‌ ಸಿಂಗ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ವಿಶ್ವವಿದ್ಯಾಲಯ ಫೆ.14ರಂದು ಮುಚ್ಚಿರುತ್ತದೆ. ಆ ದಿನ ಯಾವುದೇ ತರಗತಿ, ಪ್ರಾಯೋಗಿಕ ಪರೀಕ್ಷೆಗಳು ಅಥವಾ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವುದಿಲ್ಲ’ ಎಂದು ಸಿಂಗ್‌ ತಿಳಿಸಿದ್ದಾರೆ.

ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿಗಳನ್ನು ಬುಧವಾರ ಕಳುಹಿಸದಂತೆ ಪೋಷಕರಲ್ಲಿ ಮನವಿ ಮಾಡಿದ್ದಾರೆ. ವಿವಿಯಲ್ಲಿ ಕಾನೂನು ಸುವ್ಯವಸ್ಥೆಯ ಸಮಸ್ಯೆಯಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಡಳಿತ ಮಂಡಳಿ ಈ ಕ್ರಮ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ವಿವಿಯ ಈ ಕ್ರಮವನ್ನು ವಿದ್ಯಾರ್ಥಿ ಸಮೂಹ ನೈತಿಕ ಪೊಲೀಸ್‌ಗಿರಿಗೆ ಹೋಲಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದೆ. ನಾವು ವಯಸ್ಕರು. ನಾವೇನು ಮಾಡಬೇಕು, ಮಾಡಬಾರದು ಎಂದು ಹೇಳುವ ಅಧಿಕಾರ ವಿವಿ ಅಧಿಕಾರಿಗಳಿಲ್ಲ’ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರೇಮಿಗಳ ದಿನದಂದು ವಿದ್ಯಾರ್ಥಿಗಳು ಹೇಗಿರಬೇಕು ಎಂದು ನೀರಿಕ್ಷಿಸುವ ಬದಲು, ವಿವಿಯಲ್ಲಿನ ಅಧ್ಯಾಪಕರು ಸರಿಯಾಗಿ ತರಗತಿಗಳನ್ನು ತೆಗೆದುಕೊಳ್ಳುವಂತೆ ನೋಡಿಕೊಂಡು ಶೈಕ್ಷಣಿಕ ವಾತಾವರಣ ಸುಧಾರಿಸಲಿ’ ಎಂದು ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದ್ದಾರೆ.

ಪ್ರೇಮಿಗಳ ದಿನದಂದು ಬಲಪಂಥೀಯ ಸಂಘಟನೆಗಳಿಂದ ಯುವಜೋಡಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಲಖನೌ ಪೊಲೀಸರು ಮುಂಜಾಗೃತ ಕ್ರಮಗಳನ್ನು ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ