ಹೊರನಾಡಿನ ಕನ್ನಡಿಗರಿಗೆ ಉದ್ಯೋಗದಲ್ಲಿ ಶೇ.5ರಷ್ಟು ಮೀಸಲಾತಿ ನೀಡಲು ರಾಜ್ಯ ಸರ್ಕಾರ ತೀರ್ಮಾನ

ಮುಂಬೈ, ಫೆ.11- ಹೊರನಾಡಿನ ಕನ್ನಡಿಗರ ಮಕ್ಕಳಿಗೂ ಉದ್ಯೋಗದಲ್ಲಿ ಶೇ.5ರಷ್ಟು ಮೀಸಲಾತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ ತಿಳಿಸಿದ್ದಾರೆ.
ಮೊಗವೀರ ಭವನದಲ್ಲಿ ನಡೆದ ಹೊರನಾಡ ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೊರನಾಡ ಕನ್ನಡಿಗರ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಉದ್ಯೋಗದಲ್ಲಿ ಶೇ.5ರಷ್ಟು ಮೀಸಲಾತಿ ನೀಡಲು ಆದೇಶ ಹೊರಡಿಸಿದೆ. ಇದರಿಂದ ಹೊರ ರಾಜ್ಯದಲ್ಲಿರುವ ಕನ್ನಡಿಗರ ಮಕ್ಕಳು ಕನ್ನಡದಲ್ಲಿ ಅಧ್ಯಯನ ಮಾಡಿ ರಾಜ್ಯದಲ್ಲಿ ಉದ್ಯೋಗ ಪಡೆದುಕೊಳ್ಳಲು ಅನುಕೂಲವಾಗಲಿದೆ. ಇದರ ಹಿಂದೆ ಸಾಕಷ್ಟು ಕನ್ನಡ ಪರ ಹೋರಾಟಗಾರರ ಪರಿಶ್ರಮ ಇದೆ ಎಂದರು.
ಮುಂಬಯಿ, ದೆಹಲಿ ಸೇರಿದಂತೆ ಹೊರ ರಾಜ್ಯಗಳಲ್ಲಿ ಕನ್ನಡ ಭಾಷೆ ಅಧ್ಯಯನ.ಮಾಡಿರುವ ಮಕ್ಕಳಿಗೆ ರಾಜ್ಯದಲ್ಲಿ ಉದ್ಯೋಗ ಪಡೆಯುವುದು ಕಷ್ಟವಾಗಿತ್ತು. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಗಮನಕ್ಕೆ ತಂದು ಒತ್ತಡ ಹೇರಿದ ಪರಿಣಾಮ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂದು ಹೇಳಿದರು.

ಸಾಹಿತ್ಯ ಪರಿಷತ್ ವತಿಯಿಂದ ಹೊರನಾಡ ಕನ್ನಡಿಗರ ಸಮಾವೇಶ ಮಾಡುವುದರಿಂದ ನಮ್ಮ ಕನ್ನಡದ ಬೇರುಗಳನ್ನು ಗಟ್ಟಿಗೊಳಿಸಿದಂತಾಗುತ್ತದೆ. ಹೊರನಾಡ ಕನ್ನಡಿಗರ ಪ್ರಥಮ ಸಮಾವೇಶವನ್ನು ದೆಹಲಿಯಲ್ಲಿ ಮಾಡಲಾಯಿತು. ಈ ವರ್ಷದ ಸಮಾವೇಶಕ್ಕೆ 12 ರಾಜ್ಯಗಳ ಕನ್ನಡಿಗರು ಪಾಲ್ಗೊಂಡಿದ್ದಾರೆ. ಮುಂಬಯಿ ನಗರವೊಂದರಲ್ಲಿಯೇ ನೂರಕ್ಕೂ ಹೆಚ್ಚು ಕನ್ನಡ ಸಂಘಗಳು ಸ್ಥಾಪನೆಯಾಗಿವೆ.
ಮುಂಬಯಿನ ಹಿರಿಯ ಸಾಹಿತಿ ಸನಿತಾ ಶೆಟ್ಟಿ ಮಾತನಾಡಿ, ಹೊರನಾಡು ಒಳನಾಡು ಎನ್ನುವುದು ರಾಜಕೀಯವಾಗಿ ಗಡಿ ರೇಖೆ ಹಾಕಿಕೊಂಡಿದ್ದೇವೆ. ಯಾವುದೇ ಸೀಮಾ ರೇಖೆ ಇಟ್ಟುಕೊಳ್ಳದೇ ಹೊರನಾಡ.ಕನ್ನಡಿಗರು ರಾಜ್ಯದ ಕಡೆಗೆ ಒಳಮುಖರಾಗಿ ಚಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಂಕಣಕಾರ ಎಸ್.ಷಡಕ್ಷರಿ, ಮೈಸೂರು ಅಸೋಸಿಯೇಷನ್‍ನ ಅಧ್ಯಕ್ಷೆ ಕಮಲಾ ಕಾಂತರಾಜ್, ಮೊಗವೀರ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷ ಕೃಷ್ಣ ಕುಮಾರ್ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ