ಸುಂಜ್ವಾನ್ ನಲ್ಲಿ ಉಗ್ರರ ದಾಳಿ: 6ಕ್ಕೇರಿದ ಸಾವಿನ ಸಂಖ್ಯೆ: ನಾಲ್ವರು ಉಗ್ರರ ಹತ್ಯೆ

Kulgam: Soldiers during an operation launched after at least two Indian Army soldiers were killed and three wounded when militants attacked a military vehicle on the Jammu-Srinagar national highway in Kulgam district on June 3, 2017. (Photo: IANS)

ಶ್ರೀನಗರ:ಫೆ-11: ಜಮ್ಮು-ಕಾಶ್ಮೀರದ ಸುಂಜುವಾನ್ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವನ್ನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ನಾಲ್ವರು ಉಗ್ರರನ್ನು ಸೇನಾಪಡೆ ಸದೆಬಡಿದಿದೆ.

ಉಗ್ರರನ್ನು ಹೊರಗಟ್ಟುವ ಕಾರ್ಯಾಚರಣೆ ಎರಡನೇ ದಿನವೂ ಮುಂದುವರಿದಿದ್ದು, ಐವರು ಯೋಧರು ಮತ್ತು ಒಬ್ಬ ನಾಗರಿಕ ಸೇರಿದಂತೆ 6 ಜನ ಬಲಿಯಾಗಿದ್ದಾರೆ. ನಾಲ್ವರು ಉಗ್ರರನ್ನೂ ಭದ್ರತಾ ಪಡೆಗಳು ಹೊಡೆದುರುಳಿಸಿವೆ.

ಸುಬೇದಾರ್‌ ಮದನ್‌ ಲಾಲ್ ಚೌಧುರಿ, ಸುಬೇದಾರ್ ಮೊಹಮ್ಮದ್‌ ಅಶ್ರಫ್‌ ಮೀರ್, ಹವಾಲ್ದಾರ್‌ ಹಬೀಬುಲ್ಲಾ ಖುರೇಷಿ, ನಾಯಕ್‌ ಮನ್ಸೂರ್‌ ಅಹಮದ್‌, ಲ್ಯಾನ್ಸ್‌ ನಾಯಕ್‌ ಮೊಹಮ್ಮದ್ ಇಕ್ಬಾಲ್‌ ಮತ್ತು ಲ್ಯಾನ್ಸ್‌ ನಾಯಕ್‌ ಮೊಹಮ್ಮದ್‌ ಇಕ್ಬಾಲ್‌ನ ತಂದೆ (ನಾಗರಿಕ) ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

2016ರಲ್ಲಿ ನಡೆದ ಉರಿ ದಾಳಿಯ ನಂತರ ಇದೇ ಮೊದಲ ಬಾರಿಗೆ ನಡೆದಿರುವ ದೊಡ್ಡ ಪ್ರಮಾಣದ ದಾಳಿ ಇದಾಗಿದೆ. ಭಾರಿ ಪ್ರಮಾಣದ ಸಶಸ್ತ್ರಗಳೊಂದಿಗೆ ಉಗ್ರರು ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದು, 24 ಗಂಟೆ ಕಳೆದರೂ ಕಾರ್ಯಾಚರಣೆ ಮುಂದುವರೆದಿದೆ.

ಸೇನಾ ಶಿಬಿರದ ಸುತ್ತಮುತ್ತಲಿನ ಶಾಲೆಗಳು ಬಂದ್ ಆಗಿದ್ದು,  ಜಮ್ಮುವಿನ ಭಾರಿ ಭದ್ರತೆ ಏರ್ಪಡಿಸಲಾಗಿದೆ. ಬೆಳಗ್ಗೆ ಸೇನಾ ವರಿಷ್ಠ ಜನರಲ್‌ ಬಿಪಿನ್ ರಾವತ್‌ ಅವರು ಜಮ್ಮುವಿಗೆ ಆಗಮಿಸಿ ಹಿರಿಯ ಕಮಾಂಡರ್‌ಗಳ ಜತೆ ಚರ್ಚಿಸಿ ಪರಿಸ್ಥಿತಿಯ ಅವಲೋಕನ ನಡೆಸಿದರು.

ಕುಟುಂಬಗಳ ವಸತಿ ಪ್ರದೇಶದಿಂದ ಜನರನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿದಿದೆ. ಸೇನೆಯ ವಸತಿ ಸಂಕೀರ್ಣದಲ್ಲಿ ಜೈಷೆ ಮೊಹಮ್ಮದ್‌ನ ಮುದ್ರೆಯೊಂದು ದೊರೆತಿದೆ. ಸಂಸತ್‌ ಭವನದ ಮೇಲಿನ ದಾಳಿ ಪ್ರಕರಣದ ಅಪರಾಧಿ ಅಫ್ಜಲ್‌ ಗುರು ಮರಣ ದಂಡನೆಯ ಐದನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಉಗ್ರರು ಈ ದಾಳಿ ನಡೆಸಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ