ಅಬುದಾಬಿಯಲ್ಲಿ ಪ್ರಧಾನಿ ಭಾಷಣ

ಅಬುಧಾಬಿ:ಫೆ-11: ಸುಗಮ ವ್ಯಾಪಾರದಲ್ಲಿ ಭಾರತ ಇಂದು ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಭಾರತ ಇಂದು ನಿರಾಶಾವಾದದ ಹಂತವನ್ನು ದಾಟಿ ಹೋಗಿದೆ; ಹೊಸ ನಂಬಿಕೆಗಳು ಜನರಲ್ಲಿ ಮೂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಬುದಾಬಿಯಲ್ಲಿ ಮೊದಲ ಹಿಂದೂ ದೇವಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದ 125 ಕೋಟಿ ಜನರ ಪರವಾಗಿ ಅಬುಧಾಬಿಯ ರಾಜಕುಮಾರ ಮೊಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಪ್ರಧಾನಿ ಧನ್ಯವಾದ ಸಲ್ಲಿಸಿದರು. ಈ ದೇವಾಲಯ ವಾಸ್ತುಶಿಲ್ಪ ಮತ್ತು ವೈಭವ, ವೈಶಿಷ್ಟ್ಯತೆಯಿಂದ ಕೂಡಿರುವುದಷ್ಟೇ ಅಲ್ಲದೆ, ವಿಶ್ವದಾದ್ಯಂತ ಜನರಿಗೆ ‘ವಸುಧೈವ ಕುಟುಂಬಕಂ’ ಸಂದೇಶವನ್ನು ಸಾರುತ್ತದೆ’ ಎಂದರು.

ವಿಶ್ವಬ್ಯಾಂಕಿನ ವರದಿ ಪ್ರಕಾರ ಸುಗಮ ವ್ಯಾಪಾರದಲ್ಲಿ ಭಾರತದಷ್ಟು ವೇಗವಾಗಿ ಯಾವ ದೇಶಗಳು ಕೂಡ ಬೆಳವಣಿಗೆ ಕಂಡಿಲ್ಲ. ಭಾರತದ ಸ್ಥಾನ 142ರಿಂದ 100ಕ್ಕೆ ಜಿಗಿದಿದೆ, ಆದರೆ ಇದರಿಂದ ನಾವು ತೃಪ್ತರಾಗಿಲ್ಲ ಎಂದರು.

ಭಾರತ ಇಂದು ನಿರಾಶಾವಾದದ ಹಂತವನ್ನು ದಾಟಿ ಹೋಗಿದೆ. ಇದು ಸಾಧ್ಯವೇ ಎಂಬ ಮನಸ್ಥಿತಿಯಿಂದ ಇಂದು ಭಾರತೀಯರು ಹೊರಬಂದು ಮೋದಿಯವರೇ ಯಾವಾಗ ಇದು ಆಗುತ್ತದೆ ಎಂದು ಕೇಳುವ ಸ್ಥಿತಿಗೆ ಬಂದಿದ್ದಾರೆ. ಇದು ಆಗುವುದಿದ್ದರೆ ಈಗಲೇ ಆಗುತ್ತದೆ ಎಂಬ ಹೊಸ ನಂಬಿಕೆ ಜನರಲ್ಲಿ ಮೂಡಿದೆ ಎಂದು ಹೇಳಿದರು.

ನೋಟುಗಳ ಅನಾಣ್ಯೀಕರಣದ ಹಿಂದಿನ ಉದ್ದೇಶವನ್ನು ಭಾರತ ದೇಶದ ಬಡಜನತೆ ಅರ್ಥಮಾಡಿಕೊಂಡಿದ್ದಾರೆ. ಆದರೆ ಇದರಿಂದ ನಿದ್ದೆ ಕಳೆದುಕೊಂಡವರು ಎರಡು ವರ್ಷಗಳು ಕಳೆದ ನಂತರ ಇಂದಿಗೂ ಅಳುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಸೊರಗಿಹೋಗಿದ್ದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ)ಯನ್ನು ಕೂಡ ಸರ್ಕಾರ ವಾಸ್ತವಗೊಳಿಸಿದೆ. ಸದ್ಯಕ್ಕೆ ಇದರ ಲಾಭ ಕಂಡುಬರದಿದ್ದರೂ ಕೂಡ ದೀರ್ಘಾವಧಿಯಲ್ಲಿ ಉತ್ತಮ ಫಲಿತಾಂಶಕ್ಕೆ ಇವೆರಡೂ ನಮ್ಮ ಸರ್ಕಾರ ತೆಗೆದುಕೊಂಡ ಕಠಿಣ ಕ್ರಮಗಳು. 70 ವರ್ಷಗಳ ಹಳೆಯ ನಿಯಮಗಳನ್ನು ತಿದ್ದುಪಡಿ ಮಾಡುವಾಗ ಅಲ್ಲಿ ಕೆಲವು ತೊಂದರೆಗಳು, ನ್ಯೂನತೆಗಳು ಕಂಡುಬರುವುದು ಸಹಜ ಎಂದು ಪ್ರಧಾನಿ ಮೋದಿ ಹೇಳಿದರು.

21ನೇ ಶತಮಾನ ಏಷಿಯಾ ಖಂಡದ್ದು ಅದರಲ್ಲಿ ಭಾರತವನ್ನು ಇನ್ನಷ್ಟು ಎತ್ತರಕ್ಕೆ ಏರಿಸಿಲು ಇನ್ನಷ್ಟು ಕೆಲಸ ಮಾಡಬೇಕಿದೆ. ಭಾರತ ದೇಶ ಬದಲಾಗುತ್ತಿದ್ದು ನಿಮ್ಮ ಕನಸುಗಳು ಆಶೋತ್ತರಗಳು ಈಡೇರಿಸುವಲ್ಲಿ ನಾನು ಕೆಲಸ ಮುಂದುವರಿಸುತ್ತೇವೆ ಎಂದು  ಪ್ರಧಾನಿ ಭರವಸೆ ನೀಡಿದರು.

 

ಫೋಟೋ ಕ್ರೆಡಿಟ್:  indianexpress.com

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ