ಐಸಿಸಿ ಅಂಡರ್ 19 ವಿಶ್ವಕಪ್ ಪಂದ್ಯ: ಟ್ರೋಪಿ ಎತ್ತಿಹಿಡಿದ ಭಾರತದ ಯುವ ಆಟಗಾರರು

ಮೌಂಟ್ ಮಾಂಗನಿ:ಫೆ-3: ಐಸಿಸಿ ಅಂಡರ್ 19 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಇತಿಹಾಸ ನಿರ್ಮಿಸಿದೆ. ರೋಚಕ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಭಾರತದ ಯುವ ಆಟಗಾರರು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

ನ್ಯೂಜಿಲೆಂಡ್ ನ ಬೇಓವಲ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತದಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡ 216 ರನ್ ಗಳಿಗೆ ಆಲೌಟ್ ಆಯಿತು. 217 ರನ್ ಗಳ ಗುರಿ ಪಡೆದ ಭಾರತ ತಂಡದ ಆರಂಭಿಕ ಆಟಗಾರರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದಾಗಿ ಭಾರತ 8 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿತು. ಇದರೊಂದಿಗೆ ಕೋಚ್ ರಾಹುಲ್ ದ್ರಾವಿಡ್ ಅವರ ಚೊಚ್ಚಲ ವಿಶ್ವಕಪ್ ಕನಸು ಸಹ ನನಸಾಗಿದೆ.

ಟಾಸ್ ಸೋತರೂ ಸಾಂಘಿಕ ದಾಳಿ ನೆರವಿನಿಂದ ಎದುರಾಳಿ ತಂಡವನ್ನು 216 ರನ್‌ಗಳಿಗೆ ಕಟ್ಟಿ ಹಾಕಿದ ಭಾರತ ಬಳಿಕ ಗೆಲುವಿನ ಗುರಿಯನ್ನು ಮನ್‌ಜೋಸ್ ಕಾಲ್ರಾ ಆಕರ್ಷಕ ಶತಕದ (101) ನೆರವಿನಿಂದ 38.5 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು.

ಟೂರ್ನಿಯುದ್ಧಕ್ಕೂ ಅಜೇಯ ಓಟ ಮುಂದುವರಿಸಿರುವ ಭಾರತ ಫೈನಲ್‌ನಲ್ಲೂ ಶ್ರೇಷ್ಠ ಮಟ್ಟದ ಪ್ರದರ್ಶನ ನೀಡುವ ಎದುರಾಳಿಗಳನ್ನು ಸದೆಬಡಿಯಿತು. ಒಟ್ಟಿನಲ್ಲಿ ಈ ಯುವ ಪ್ರತಿಭಾವಂತ ಆಟಗಾರರ ಕೈಯಲ್ಲಿ ಭಾರತದ ಕ್ರಿಕೆಟ್ ಭವಿಷ್ಯ ಭದ್ರವಾಗಿದೆ ಎಂಬುದನ್ನು ನಿರೂಪಿಸಿದೆ.

ಮನ್‌ಜೋತ್ ಅಜೇಯ ಶತಕ:
ನಾಯಕ ಪೃಥ್ವಿ ಶಾ ಹಾಗೂ ಬಲಗೈ ಆರಂಭಿಕ ಮನ್‌ಜೋತ್‌ ಕಾಲ್ರಾ ತಂಡಕ್ಕೆ ಉತ್ತಮ ಆರಂಭವೊದಗಿಸಿದರು. ಈ ನಡುವೆ ಸುರಿದ ತಂತುರು ಮಳೆ ಸ್ವಲ್ಪ ಹೊತ್ತು ಪಂದ್ಯಕ್ಕೆ ಅಡಚಣೆಯನ್ನುಂಟು ಮಾಡಿತ್ತು. ಪೃಥ್ವಿ-ಮನ್‌ಜೋತ್ ಬೆಂಬಲದಿಂದಾಗಿ 8.5 ಓವರ್‌ಗಳಲ್ಲೇ ತಂಡವು 50ರ ಗಡಿ ದಾಟಿತು.

ಈ ನಡುವೆ ಉತ್ತಮವಾಗಿ ಆಡುತ್ತಿದ್ದ ನಾಯಕ ಪೃಥ್ವಿ ಕ್ಲೀನ್ ಬೌಲ್ಡ್ ಆಗಿ ನಿರಾಸೆ ಮೂಡಿಸಿದರು. 41 ಎಸೆತಗಳನ್ನು ಎದುರಿಸಿದ ಪೃಥ್ವಿ ನಾಲ್ಕು ಬೌಂಡರಿಗಳಿಂದ 29 ರನ್ ಗಳಿಸಿದರು. ಮೊದಲ ವಿಕೆಟ್ ಪತನದ ವೇಳೆ ಭಾರತದ ಸ್ಕೋರ್ 11.4 ಓವರ್‌ಗಳಲ್ಲಿ 71/1.

ಬಳಿಕ ಇನ್ ಫಾರ್ಮ್ ಬ್ಯಾಟ್ಸ್‌ಮನ್ ಶುಭಮನ್‌ ಗಿಲ್‌ ಜತೆಗೂಡಿದ ಮನ್‌ಜೋತ್ ತಂಡವನ್ನು ಮುನ್ನಡೆಸಿದರು. ಇದರೊಂದಿಗೆ 15.5 ಓವರ್‌ಗಳಲ್ಲಿ ತಂಡವು 100ರ ಗಡಿ ದಾಟಿತು.

ಅತಿ ಒತ್ತಡದ ಫೈನಲ್ ಮುಖಾಮುಖಿಯಲ್ಲಿ ಗರಿಷ್ಠ ಗುಣಮಟ್ಟದ ಬ್ಯಾಟಿಂಗ್ ಪ್ರದರ್ಶಿಸಿದ ಮನ್‌ಜೋತ್ ಆಕರ್ಷಕ ಅರ್ಧಶತಕ ಸಾಧನೆಯನ್ನು ಮಾಡಿದರು. ಅಲ್ಲದೆ ಗಿಲ್ ಜತೆಗೆ ದ್ವಿತೀಯ ವಿಕೆಟ್‌ಗೂ 60 ರನ್‌ಗಳ ಜತೆಯಾಟದಲ್ಲಿ ಭಾಗಿಯಾದರು.

30 ಎಸೆತಗಳನ್ನು ಎದುರಿಸಿದ ಗಿಲ್ ನಾಲ್ಕು ಬೌಂಡರಿಗಳಿಂದ 31 ರನ್ ಗಳಿಸಿ ಔಟಾದರು. ಅತ್ತ ಪೃಥ್ವಿ ಹಾಗೂ ಗಿಲ್ ಅವರಂತಹ ಎರಡು ಪ್ರಮುಖ ವಿಕೆಟುಗಳು ಪತನವಾಗಿರುವುದನ್ನು ಮನಗಂಡು ಜವಾಬ್ದಾರಿಯನ್ನು ಅರಿತು ಆಟವಾಡಿದ ಮನ್‌ಜೋತ್ ತಂಡಕ್ಕೆ ಹೆಚ್ಚಿನ ಆಘಾತವಾಗದಂತೆ ನೋಡಿಕೊಂಡರು. 25ನೇ ಓವರ್ ವೇಳೆಗೆ ಭಾರತ ಎರಡು ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತ್ತು. ಈ ಮೂಲಕ ಕೊನೆಯ 150 ಎಸೆತಗಳಲ್ಲಿ ತಂಡದ ಗೆಲುವಿಗೆ 73 ರನ್‌ಗಳಷ್ಟೇ ಅಗತ್ಯವಿತ್ತು.

ಅಂತಿಮ ಹಂತದಲ್ಲಿ ಮನ್‌ಜೋತ್ ಅವರಿಗೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಹಾರ್ವಿಕ್ ದೇಸಾಯಿ ಅವರಿಂದಲೂ ಉತ್ತಮ ಬೆಂಬಲ ದೊರೆಯಿತು. ಅಮೋಘ ಶತಕ ಬಾರಿಸಿದ ಕಾಲ್ರಾ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಅಲ್ಲದೆ ದೇಸಾಯಿ ಜತೆಗೆ ಮುರಿಯದ ಮೂರನೇ ವಿಕೆಟ್‌ಗೆ 89 ರನ್‌ಗಳ ಜತೆಯಾಟವನ್ನು ನೀಡಿದರು.

102 ಎಸೆತಗಳನ್ನು ಎದುರಿಸಿದ ಮನ್‌ಜೋತ್ ಎಂಟು ಬೌಂಡರಿ ಹಾಗೂ ಮೂರು ಅಮೋಘ ಸಿಕ್ಸರ್‌ಗಳಿಂದ 101 ರನ್ ಗಳಿಸಿ ಅಜೇಯರಾಗುಳಿದರು. ಅತ್ತ ದೇಸಾಯಿ ಸಹ 61 ಎಸೆತಗಳಲ್ಲಿ ಐದು ಬೌಂಡರಿಗಳಿಂದ 47 ರನ್ ಗಳಿಸಿ ಔಟಾಗದೆ ಉಳಿದರು.ಆಸೀಸ್ ಪರ ಒಂದು ವಿಕೆಟ್ ಕಬಳಿಸಿದ ಉಪ್ಪಲ್ ಹೊರತಾಗಿ ಇತರೆಲ್ಲ ಬೌಲರ್‌ಗಳು ವೈಫಲ್ಯವನ್ನು ಅನುಭವಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ